ಅಕ್ಷರ ದಾಸೋಹ ಅಕ್ಕಿ ಹಗರಣ: ಹಾರಾಡಿ ಶಾಲಾ ಮುಖ್ಯ ಗುರು ಅಮಾನತು

Update: 2019-07-08 18:05 GMT

ಪುತ್ತೂರು: ಅಕ್ಷರದಾಸೋಹ ಯೋಜನೆಯಡಿ ಮಕ್ಕಳ ಬಿಸಿಯೂಟ ತಯಾರಿಕೆಗೆ ಶಾಲೆಗೆ ಸರಬರಾಜದ ಅಕ್ಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ತಾಲೂಕಿನ ಹಾರಾಡಿ ಉನ್ನತೀಕರಿಸಿದ ಮಾದರಿಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮುದರರನ್ನು ಸೇವೆಯಿಂದ ಅಮಾನತುಗೊಳಿಸಿ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಆದೇಶಿಸಿದ್ದಾರೆ. 

ಹಾರಾಡಿ ಶಾಲಾ ಎಸ್‍ಡಿಎಂಸಿ ಸಮಿತಿಯು ಮಕ್ಕಳ ಬಿಯೂಟದ 11ಚೀಲ ಅಕ್ಕಿ ಮತ್ತು ಇತರ ಸಾಮಾಗ್ರಿಗಳನ್ನು ಮಾರಾಟ ಮಾಡಿ ತಪ್ಪು ಲೆಕ್ಕವನ್ನು ದಾಖಲೆ ಮಾಡುತ್ತಿದ್ದ ಮುಖ್ಯ ಶಿಕ್ಷಕರ ವಿರುದ್ಧ ಜಿಲ್ಲಾ ಪಂಚಾಯತ್ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಅವರಿಗೆ ದೂರು ನೀಡಿತ್ತು. ಪುತ್ತೂರು ತಾಲೂಕು ಪಂಚಾಯತ್ ಅದ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ದ.ಕ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಇದರ ಹಿನ್ನಲೆಯಲ್ಲಿ ಹಾರಾಡಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ಪುತ್ತೂರು ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಅವರು ಶಾಲಾ ಎಸ್‍ಡಿಎಂಸಿ ಸದಸ್ಯರ ಉಪಸ್ಥಿತಿಯಲ್ಲಿ ತನಿಖೆ ನಡೆಸಿ ಜಿಲ್ಲಾ ಪಂಚಾಯತ್‍ಗೆ ವರದಿ ಸಲ್ಲಿಸಿದ್ದರು.

ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರು ತನಿಖಾ ವರದಿಯನ್ನು ಪರಶೀಲಿಸಿ ಶಿಕ್ಷಣ ಇಲಾಖೆಯ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಮುಂದಿನ ಕ್ರಮಕ್ಕೆ ರವಾನಿಸುವಂತೆ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಿದ್ದರು. ಇದರಂತೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಕೆಯಾಗಿತ್ತು. ವರದಿಯನ್ನು ಪರಿಶೀಲಿಸಿದ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ ತನಿಖಾ ವರದಿಯಲ್ಲಿ ಮುಖ್ಯ ಶಿಕ್ಷಕ ಮುದರ ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಭೀತಾಗಿರುವುದರಿಂದ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಹಾರಾಡಿ ಶಾಲೆಯಲ್ಲಿ ತೆರವಾದ ಮುಖ್ಯಶಿಕ್ಷಕರ ಹುದ್ದೆಗೆ ಶಾಲೆಯ ಹಿರಿಯ ಶಿಕ್ಷಕಿ ಪ್ರಿಯ ಕುಮಾರಿ ಅವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.

ಪುತ್ತೂರು ತಾಲೂಕಿನ ಎಲ್ಲಾ ಶಾಲೆಗಳ ಅಕ್ಷರದಾಸೋಹ ಯೋಜನೆಯ ಸಾಮಾಗ್ರಿ ಸರಬರಾಜು ಮತ್ತು ಬಳಕೆಯ ಕುತು ಸಮಗ್ರ ತನಿಖೆ ನಡೆಸಲಾಗುವುದು. ಬೇರೆ ಬೇರೆ ಶಾಲೆಗಳ ಎಸ್‍ಡಿಎಂಸಿಯಿಂದ ನನಗೆ ದೂರುಗಳು ಬಂದಿವೆ ನಾನು ಈ ಕುರಿತು ಕಾರ್ಯಪ್ರವೃತ್ತನಾಗಲಿದ್ದೇನೆ.
ಕೆ. ರಾಧಾಕೃಷ್ಣ ಬೋರ್ಕರ್, ಅಧ್ಯಕ್ಷರು, ತಾಲೂಕು ಪಂಚಾಯತ್, ಪುತ್ತೂರು

ಮಕ್ಕಳು ಊಟ ಮಾಡುವ ಅಕ್ಕಿ ಮತ್ತು ಇತರ ಅಡುಗೆ ಸಾಮಾಗ್ರಿಗಳ ಹಗರಣ ನಡೆಸಿದ ಮುಖ್ಯಶಿಕ್ಷಕ ಮುದರ ಅವರನ್ನು ಅಮಾನತು ಮಾಡಿರುವುದು ಸರಿಯಾದ ಕ್ರಮ ಈ ಕುರಿತು ದೂರು ನೀಡಿದ ಎಸ್‍ಡಿಎಂಸಿಯ ಸಾರ್ವಜನಿಕ ಕಾಳಜಿಗೆ ನ್ಯಾಯ ಸಿಕ್ಕಿತು.
ಪ್ರತಿಮಾ ರೈ, ಅಧ್ಯಕ್ಷರು
ಎಸ್‍ಡಿಎಂಸಿ, ಹಾರಾಡಿ ಶಾಲೆ ಪುತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News