×
Ad

ಲೋಕಸಭೆಯಲ್ಲಿ ಜಲಿಯನ್ವಾಲಾ ಬಾಗ್ ಮಸೂದೆ ಮಂಡನೆ: ಕಾಂಗ್ರೆಸ್ ವಿರೋಧ

Update: 2019-07-09 00:06 IST

ಹೊಸದಿಲ್ಲಿ, ಜು.8: ಜಲಿಯನ್‌ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕವನ್ನು ನಿರ್ವಹಿಸುವ ಟ್ರಸ್ಟನ್ನು ರಾಜಕೀಯರಹಿತಗೊಳಿಸಲು ಅದರ ಶಾಶ್ವತ ಸದಸ್ಯ ಸ್ಥಾನದಿಂದ ಕಾಂಗ್ರೆಸ್ ಅಧ್ಯಕ್ಷರನ್ನು ತೆಗೆದುಹಾಕುವ ಉದ್ದೇಶದಿಂದ ನೂತನ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು. ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮಂಡಿಸಿದ ಜಲಿಯನ್‌ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನು ಟ್ರಸ್ಟಿ ಎಂದು ಉಲ್ಲೇಖಿಸಿರುವುದನ್ನು ಅಳಿಸಿ ಹಾಕುತ್ತದೆ. ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಇದು ದೇಶದ ಪರಂಪರೆಯ ನಿರಾಕರಣೆಯಾಗಿದೆ. ಅದನ್ನು ತಡೆಯಲೇಬೇಕು. ಜಲಿಯನ್‌ವಾಲಾ ಬಾಗ್ ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ನಮ್ಮ ಇತಿಹಾಸ ಮತ್ತು ಪರಂಪರೆಗೆ ಮೋಸ ಮಾಡಬೇಡಿ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪಟೇಲ್, ಕಳೆದ 40-50 ವರ್ಷಗಳಿಂದ ಕಾಂಗ್ರೆಸ್ ಈ ಸ್ಮಾರಕಕ್ಕೆ ಏನನ್ನೂ ಮಾಡಲಿಲ್ಲ. ಈ ಮಸೂದೆ ಪರಿಗಣನೆಗೆ ಮತ್ತು ಮಂಡನೆಗೆ ಬಂದಾಗ ವಿವರವಾದ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ. ಸದ್ಯ ಕೇವಲ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಾತ್ರ ಈ ಟ್ರಸ್ಟ್‌ನ ಸದಸ್ಯನಾಗಬಹುದಾಗಿದೆ. ಆದರೆ ನೂತನ ಮಸೂದೆ ಜಾರಿಗೆ ಬಂದರೆ ಲೋಕಸಭೆಯಲ್ಲಿ ಅತೀದೊಡ್ಡ ವಿಪಕ್ಷದ ನಾಯಕ ಈ ಟ್ರಸ್ಟ್‌ನ ಸದಸ್ಯನಾಗಲು ದಾರಿ ಮಾಡಿಕೊಡಲಿದೆ. ನಾಮಾಂಕಿತ ಟ್ರಸ್ಟಿಯನ್ನು ಅಧಿಕಾರದ ಅವಧಿ ಮುಗಿಯುವುದಕ್ಕೂ ಮೊದಲೇ ಯಾವುದೇ ಕಾರಣ ನೀಡದೆ ಉಚ್ಛಾಟಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಈ ಮಸೂದೆ ನೀಡುತ್ತದೆ. ಸದ್ಯ ಪ್ರಧಾನ ಮಂತ್ರಿ ಈ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರೆ ಕಾಂಗ್ರೆಸ್ ಅಧ್ಯಕ್ಷ, ಸಂಸ್ಕೃತಿ ಸಚಿವ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಪಂಜಾಬ್ ರಾಜ್ಯಪಾಲ ಮತ್ತು ಪಂಜಾಬ್ ಮುಖ್ಯಮಂತ್ರಿ ಅದರ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News