ಹವಾಮಾನ ವೈಪರೀತ್ಯಕ್ಕೆ ಕಳೆದ ವರ್ಷ ದೇಶದಲ್ಲಿ ಬಲಿಯಾದವರೆಷ್ಟು ಗೊತ್ತೇ?

Update: 2019-07-09 03:56 GMT

ಹೊಸದಿಲ್ಲಿ, ಜು.9: ಕಳೆದ ವರ್ಷ ಭಾರತದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕನಿಷ್ಠ 2,400 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ ಪ್ರಕಟಿಸಿದೆ. ಜಾಗತಿಕ ತಾಪಮಾನವು ಹವಾಮಾನ ವೈಪರೀತ್ಯದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂಬ ಸರ್ಕಾರ ಅಭಿಪ್ರಾಯಪಟ್ಟಿದ್ದರೂ, ಹವಾಮಾನ ಬದಲಾವಣೆ ಹಾಗೂ ನೈಸರ್ಗಿಕ ವಿಕೋಪಗಳಿಗೆ ನೇರ ಸಂಬಂಧ ಇದೆ ಎನ್ನುವ ವಾದವನ್ನು ಅಲ್ಲಗಳೆದಿದೆ.

"ಗೃಹ ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, 2,405 ಮಂದಿ ಕಳೆದ ಹಣಕಾಸು ವರ್ಷದಲ್ಲಿ ಬಿರುಗಾಳಿ/ ಪ್ರವಾಹ/ ಭೂಕುಸಿತ/ ಮೇಘಸ್ಫೋಟ ಮತ್ತಿತರ ವಿಕೋಪಗಳಿಗೆ ಬಲಿಯಾಗಿದ್ದಾರೆ" ಎಂದು ಪರಿಸರ ಖಾತೆ ರಾಜ್ಯ ಸಚಿವರಾದ ಬಬೂಲ್ ಸುಪ್ರಿಯೊ, ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಜಾಗತಿಕ ತಾಪಮಾನವು ಹವಾಮಾನ ವೈಪರೀತ್ಯದ ಘಟನೆಗಳು ಆಗಾಗ್ಗೆ ಸಂಭವಿಸಲು ಮತ್ತು ತೀವ್ರವಾಗಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. "1980-2010ರ ಅವಧಿಯಲ್ಲಿ ಭಾರತ 431 ಪ್ರಮುಖ ನೈಸರ್ಗಿಕ ವಿಕೋಪಗಳನ್ನು ಎದುರಿಸಿದೆ. ಇದರ ಪರಿಣಾಮವಾಗಿ ಜೀವಹಾನಿ, ಆಸ್ತಿಪಾಸ್ತಿ ಮತ್ತು ಸಂಪನ್ಮೂಲ ನಷ್ಟವಾಗಿದೆ. ಆದರೆ ಇವುಗಳಿಗೂ ಜಾಗತಿಕ ತಾಪಮಾನಕ್ಕೂ ನೇರ ಸಂಬಂಧ ಇರುವುದು ದೃಢಪಟ್ಟಿಲ್ಲ ಎಂದು ವಿವರಿಸಿದ್ದಾರೆ.

ಜಾಗತಿಕ ತಾಪಮಾನ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಸಚಿವರು, "ಸೌರ ವಿದ್ಯುತ್, ವಿದ್ಯುತ್ ಕ್ಷಮತೆ, ನೀರು, ಕೃಷಿ, ಹಿಮಾಲಯನ್ ಪರಿಸರ ವ್ಯವಸ್ಥೆ, ಸುಸ್ಥಿರ ವಾಸತಾಣ, ಹಸಿರು ಭಾರತ ಹಾಗೂ ಹವಾಮಾನ ಬದಲಾವಣೆಯ ಪ್ರಮುಖ ಜ್ಞಾನ ಪಡೆಯುವುದು ಸೇರಿದಂತೆ ಹಲವು ಕ್ರಮಗಳನ್ನು ಹವಾಮಾನ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News