ಹಳೆಯಂಗಡಿ: ರಸ್ತೆ ಬದಿ ಗುಂಡಿಗೆ ಬಿದ್ದ ಬೈಕ್ ಸವಾರ, ಆಕ್ರೋಶಿತ ಸಾರ್ವಜನಿಕರಿಂದ ಪ್ರತಿಭಟನೆ

Update: 2019-07-09 06:51 GMT

ಹಳೆಯಂಗಡಿ: ಜು.9: ಬೈಕ್ ಸವಾರನೋರ್ವ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡ ಪರಿಣಾಮ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ರಸ್ತೆ ಮದ್ಯೆ ಇರುವ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ ಬಳಿ ಮಂಗಳವಾರ ಬೆಳಗ್ಗೆ ನಡೆಯಿತು.

 ರಾಷ್ಟ್ರೀಯ ಹೆದ್ದಾರಿಯಿಂದ ಪಕ್ಷಿಕೆರೆ ಕಡೆ ತೆರಳುವ ತಿರುವಿನಲ್ಲಿ ದೊಡ್ಡ ಹೊಂಡ ಸೃಷ್ಟಿಯಾಗಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಕಷ್ಟದಿಂದ ಸಂಚರಿಸುವಂತಾಗಿದೆ. ಗುಂಡಿ ತಪ್ಪಿಸುವ ಸಲುವಾಗಿ ವಾಹನ ಸವಾರರು ರಸ್ತೆಯ ಒಳ ಭಾಗದಲ್ಲಿ ಸಾಗುವಾಗ ಹಲವಾರು ಅನಾಹುತಗಳು ಸಂಭವಿಸಿದ್ದೂ ಇದೆ.

ಈ ರಸ್ತೆ ಸಮಸ್ಯೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೂ ಸರಿಪಡಿಸಿಲ್ಲ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಾಮನ ಪೂಜಾರಿ, ನಿರಂಜನ್ ಬಂಗೇರ, ತೇಜುಪಾಲ್ ಸುವರ್ಣ, ಕಿರಣ್ ಪಕ್ಷಿಕೆರೆ, ಖಾಸಿಂ ಸಾಹೇಬ್, ಯೂಸುಫ್, ಯೋಗೀಶ್, ಚಂದ್ರ, ಪ್ರವೀಣ್, ರಾಜ್ ಕುಮಾರ್, ಹನೀಫ್, ರಿಕ್ಷಾ ಚಾಲಕರಾದ ಉಸ್ಮಾನ್, ಪ್ರಶಾಂತ್ ಹಾಗೂ ಸ್ಥಳೀಯ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News