×
Ad

ಕಾರ್ಗಿಲ್ ಯೋಧನ ನಂತರ ಸಿಐಎಸ್‍ಎಫ್ ಹೆಡ್ ಕಾನ್‍ಸ್ಟೇಬಲ್ ಗೆ ಪೌರತ್ವ ಸಾಬೀತುಪಡಿಸಲು ನೋಟಿಸ್

Update: 2019-07-09 14:10 IST

ಗುವಾಹಟಿ, ಜು.9: ಕಾರ್ಗಿಲ್ ಯೋಧ ಮುಹಮ್ಮದ್ ಸನಾವುಲ್ಲಾ ನಂತರ ಇದೀಗ ಅಸ್ಸಾಂನಲ್ಲಿ ಸಿಐಎಸ್‍ಎಫ್ ಹೆಡ್ ಕಾನ್‍ಸ್ಟೇಬಲ್ ಒಬ್ಬರ ಭಾರತೀಯ ಪೌರತ್ವವನ್ನು ಪ್ರಶ್ನಿಸಲಾಗಿದೆ.

ಮಮೂದ್ ಅಲಿ ಎಂಬ 46 ವರ್ಷದ ಹೆಡ್ ಕಾನ್‍ ಸ್ಟೇಬಲ್ ಅವರಿಗೆ ಸಂಬಂಧಿತ ಪ್ರಾಧಿಕಾರದಿಂದ ನೋಟಿಸ್ ಜಾರಿಯಾಗಿದ್ದು, ಅವರನ್ನು ‘ಡಿ ವೋಟರ್' ಎಂದೂ ಕರೆಯಲ್ಪಡುವ ‘ಶಂಕಿತ ಮತದಾರ' ಎಂದು ಗುರುತಿಸಲಾಗಿದೆ. ಆದರೆ ಪ್ರಸಕ್ತ ಪಶ್ಚಿಮ ಬಂಗಾಳದ ಬಂಕೂರ ಎಂಬಲ್ಲಿ ಕರ್ತವ್ಯ ನಿಮಿತ್ತ ನಿಯೋಜನೆಯಲ್ಲಿರುವ ಈ ಸಿಐಎಸ್‍ಎಫ್ ಜವಾನ ತಮ್ಮ ಕುಟುಂಬ ಅಸ್ಸಾಂನಲ್ಲಿ  ಭಾರತಕ್ಕೆ ಸ್ವಾತಂತ್ರ್ಯ ದೊರಕುವುದಕ್ಕಿಂತ ಮೊದಲಿನಿಂದಲೇ ವಾಸವಾಗಿದೆ ಎಂದು ಹೇಳಿಕೊಂಡಿದ್ದಾರೆ.

1995ರಲ್ಲಿ ಸಿಐಎಸ್‍ಎಫ್ ಸೇರಿದ ಅಲಿ ಅವರು ತಮ್ಮ ಬಳಿ 1997ರಲ್ಲಿ ಮೃತಪಟ್ಟ ತಮ್ಮ ತಂದೆ ಕರಮತ್ ಅಲಿ ಕುರಿತಾದ 1971ರ ಪೂರ್ವ ದಾಖಲೆಗಳಿವೆ ಹಾಗೂ ಕರಡು ಎನ್‍ಆರ್‍ಸಿಯಲ್ಲಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರುಗಳ ಹೆಸರಿತ್ತು ಎಂದು ಹೇಳಿದ್ದಾರೆ.

ಇತ್ತೀಚೆಗೆ ತಮಗೆ ಡಿ ವೋಟರ್ ನೋಟಿಸ್ ಜಾರಿಯಾದ ನಂತರ ಜುಲೈ 6ರಂದು  ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಕಾಮ್ರೂಪ್ ಜಿಲ್ಲೆಯವರಾದ ಅಲಿ ಹೇಳಿದ್ದಾರೆ.

ತಮ್ಮ ತಂದೆಯ 1946ರ ಶಾಲಾ ಪ್ರಮಾಣ ಪತ್ರಗಳು 1951 ಎನ್‍ಆರ್‍ಸಿ ಪ್ರತಿ ಹಾಗೂ  ತಮ್ಮ ಹಾಗೂ ತಮ್ಮ ತಂದೆಯ ಹೆಸರುಗಳಿದ್ದ 1966 ಮತದಾರರ ಪಟ್ಟಿಯ ಪ್ರತಿಗಳನ್ನೂ ಅವರು ಅಧಿಕಾರಿಗಳಿಗೆ ನೀಡಿದ್ದಾಗಿ ಹೇಳಿದ್ದಾರೆ.

ತಮ್ಮನ್ನು ಶಂಕಿತ ಮತದಾರ ಎಂದು ಏಕೆ ಪರಿಗಣಿಸಲಾಗಿದೆ ಎಂದು ತಿಳಿಯದು ಎಂದೂ ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News