ದನಕ್ಕೆ ಢಿಕ್ಕಿ ಹೊಡೆದ ರೈಲು: ಚಾಲಕನಿಗೆ ಗೋರಕ್ಷಕನಿಂದ ಹಲ್ಲೆ

Update: 2019-07-09 08:57 GMT

ಅಹ್ಮದಾಬಾದ್, ಜು.9: ರೈಲೊಂದು ದನಕ್ಕೆ ಢಿಕ್ಕಿ ಹೊಡೆದ ನಂತರ ರೈಲಿನ ಚಾಲಕನಿಗೆ ಗೋರಕ್ಷಕರು ಹಲ್ಲೆ ನಡೆಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಲೋಕೋ ಪೈಲಟ್ ಜಿ ಎ ಝಾಲ ಅವರು ಚಲಾಯಿಸುತ್ತಿದ್ದ ಗ್ವಾಲಿಯರ್-ಅಹ್ಮದಾಬಾದ್ ಸೂಪರ್ ಫಾಸ್ಟ್ ರೈಲು ಪಟಾನ್ ಎಂಬಲ್ಲಿನ ಸಿಧ್ಪುರ್ ಜಂಕ್ಷನ್ ಹತ್ತಿರ ತಲುಪುತ್ತಿದ್ದಂತೆಯೇ ದನವೊಂದು ಹಳಿಗೆ ಹಾರಿತ್ತು. ತಕ್ಷಣ ಸ್ಟೇಶನ್ ಮಾಸ್ಟರ್ ಕೆಂಪು ಧ್ವಜ ತೋರಿಸಿದ್ದರೂ ರೈಲು ತಕ್ಷಣ ನಿಲ್ಲದೆ ಮುಂದೆ ಹೋದ ಕಾರಣ  ಅದು ದನಕ್ಕೆ ಢಿಕ್ಕಿ ಹೊಡೆದಿತ್ತು.

ನಂತರ ರೈಲಿನ ಚಾಲಕ ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಿ ಹಳಿಯಲ್ಲಿದ್ದ ದನದ ಮೃತದೇಹ ತೆಗೆಯುವಂತೆ ತಿಳಿಸಿದಾಗ ರೈಲಿನಲ್ಲಿದ್ದ ಪ್ರಯಾಣಿಕ, 28 ವರ್ಷದ ಬಿಪಿನ್ ಸಿಂಗ್ ರಾಜಪುತ್ ಎಂಬಾತ ಚಾಲಕನನ್ನು ನಿಂದಿಸಲು ಆರಂಭಿಸಿದನಲ್ಲದೆ, ತನ್ನನ್ನು ಗೋರಕ್ಷಕನೆಂದು ಹೇಳಿಕೊಂಡು ಚಾಲಕನಿಗೆ ಹಲ್ಲೆಯನ್ನೂ ಮಾಡಲಾರಂಭಿಸಿದ್ದ. ಕೆಲವೇ ಸಮಯದಲ್ಲಿ ಅಲ್ಲಿಗೆ ಸುಮಾರು 150ರಷ್ಟಿದ್ದ ಗೋರಕ್ಷಕರ ದಂಡು ಆಗಮಿಸಿ ರೈಲು ಚಾಲಕನಿಗೆ ಬೆದರಿಕೆಯೊಡ್ಡಲಾರಂಭಿಸಿತ್ತು.

ರೈಲು ನಂತರ ತನ್ನ ಪಯಣ ಮುಂದುವರಿಸಿದರೂ ಎರಡು ಜಂಕ್ಷನ್ ಗಳಲ್ಲಿ ರಾಜಪುತ್ ಮತ್ತೆ ಚಾಲಕನಿಗೆ ಹಲ್ಲೆ ನಡೆಸಿದ್ದ. ಕೊನೆಗೆ ತಡೆಯಲಾರದೆ ಮೆಹ್ಸಾನ ಎಂಬಲ್ಲಿ ರೈಲು ನಿಂತ ಕೂಡಲೇ ಪೊಲೀಸ್ ದೂರು ನೀಡಲು ತೆರಳಿದ ಚಾಲಕನಿಗೆ ರಾಜಪುತ್ ಮತ್ತೆ ಹಲ್ಲೆ ನಡೆಸಿದ್ದ. ನಂತರ ಆತನನ್ನು ರೈಲ್ವೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News