ದ.ಕ. ಜಿಲ್ಲೆಯಲ್ಲಿ ಉತ್ತರ ಭಾರತದ ಪರಿಸ್ಥಿತಿ ನಿರ್ಮಾಣ: ಎಂಡಿಸಿ ಆರೋಪ

Update: 2019-07-09 09:01 GMT

ಮಂಗಳೂರು, ಜು.9: ಗೋವುಗಳ ಸಾಗಾಟ, ಗೋಮಾಂಸ ಭಕ್ಷಣೆ ಸಹಿತ ಕೆಲವು ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯಲ್ಲಿ ಉತ್ತರ ಭಾರತದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಸ್ಲಿಂ ಡೆವಲಪ್‌ಮೆಂಟ್ ಕಮಿಟಿ(ಎಂಡಿಸಿ) ಆರೋಪಿಸಿದೆ.

ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಎಂಡಿಸಿ ಸ್ಥಾಪಕ ರಫೀಉದ್ದೀನ್ ಕುದ್ರೋಳಿ ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದೀಚೆಗೆ ಕಲುಷಿತ ವಾತಾವರಣವಿದೆ. ಗೋವುಗಳ ಸಾಗಾಟದ ನೆಪದಲ್ಲಿ ಹಲ್ಲೆ, ದರೋಡೆ ಹೆಚ್ಚುತ್ತಿವೆ. ಉತ್ತರ ಭಾರತದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಯಾವ ರೀತಿಯ ದೌರ್ಜನ್ಯ ನಡೆಯುತ್ತಿದೆಯೋ ಅದೇ ಮಾದರಿಯ ಕೃತ್ಯಗಳು ನಡೆಯುತ್ತಿರುವುದು ವಿಷಾದನೀಯ. ಇದನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಗೋವುಗಳ ಸಾಗಾಟ-ಮಾರಾಟ-ಭಕ್ಷಣೆಯಲ್ಲಿ ಕೇವಲ ಮುಸ್ಲಿಮರಿಲ್ಲ. ಹಿಂದೂ, ಮುಸ್ಲಿಮ್, ಕ್ರೈಸ್ತರು ಕೂಡ ಇದರಲ್ಲಿದ್ದಾರೆ. ಆದರೆ ಮತೀಯ ಶಕ್ತಿಗಳು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡು ಕಾರ್ಯಾಚರಿಸುತ್ತಿವೆ. ಹಾಗಾಗಿ ಸರಕಾರವೇ ಗೋ ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಿ. ಅಕ್ರಮ ಸಾಗಾಟದ ನೆಪದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುವುದನ್ನು ನಿಲ್ಲಿಸಲಿ. ಎಲ್ಲಕ್ಕಿಂತ ಮುಖ್ಯವಾಗಿ ವಾರ್ಷಿಕ 30 ಸಾವಿರ ಕೋಟಿ ರೂ. ವಹಿವಾಟಿನ ವಿದೇಶಕ್ಕೆ ಗೋ ಮಾಂಸ ರಫ್ತನ್ನು ತಡೆಯಲಿ. ಆಗ ಇವರ ಗೋ ಪ್ರೇಮ ಬಹಿರಂಗಗೊಳ್ಳಲಿದೆ ಎಂದು ರಫೀಉದ್ದೀನ್ ಕುದ್ರೋಳಿ ಹೇಳಿದರು.

ಮೊನ್ನೆ ನಗರದಲ್ಲಿ ಗೋ ವ್ಯಾಪಾರದಲ್ಲಿ ತೊಡಗಿಸಿಕೊಂಡ 102 ಮಂದಿಯನ್ನು ಪೊಲೀಸ್ ಆಯುಕ್ತರು ಪರೇಡ್ ಮಾಡಿಸಿದ್ದಾರೆ. ಆ ಬಗ್ಗೆ ಪತ್ರಿಕೆಯೊಂದು ಗೋ ಕಳ್ಳರು ಎಂದು ಬರೆದಿದೆ. ಈ ಕುರಿತು ಪೊಲೀಸ್ ಆಯುಕ್ತರ ಜೊತೆ ಚರ್ಚಿಸಿದ ಬಳಿಕ ಆ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದ ರಫೀಉದ್ದೀನ್ ಕುದ್ರೋಳಿ, ಗೋ ಸಾಗಾಟ-ಮಾರಾಟದಲ್ಲಿ ಮುಸ್ಲಿಂ ಸಮುದಾಯ ಮಾತ್ರ ಭಾಗಿಯಾಗಿವೆ ಎಂದು ಪೊಲೀಸ್ ಇಲಾಖೆಯು ತಪ್ಪು ತಿಳಿದುಕೊಂಡಿವೆ. ಇದರಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಕೂಡ ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳಬೇಕಿದೆ ಎಂದರು.

*ಜೈಶ್ರೀರಾಮ್, ಜೈ ಹನುಮಾನ್ ಕೋಮುವಾದಿಗಳ ನವೀನ ಅಸ್ತ್ರ: ಜೈ ಶ್ರೀರಾಮ್, ಜೈ ಹನುಮಾನ್ ಕೋಮುವಾದಿಗಳ ನವೀನ ಅಸ್ತ್ರವಾಗಿದೆ. ಈ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿ ಅಮಾಯಕ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಲಾಗುತ್ತದೆ. ಇಂತಹ ವಿಕೃತ ಮನೋಭಾವಕ್ಕೆ ತಡೆ ಹಾಕಬೇಕಿದೆ. ಕೆಲವು ಮಠಾಧಿಪತಿಗಳು ಕೂಡ ಧಾರ್ಮಿಕ  ಲ್ಯವನ್ನು ಬೋಧಿಸುವ ಬದಲು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ಖಂಡನೀಯ ಎಂದು ಎಂಡಿಸಿ ಅಧ್ಯಕ್ಷ ಅಮೀರ್ ಅಹ್ಮದ್ ತುಂಬೆ ಹೇಳಿದರು.

ಈ ಹಿಂದೆ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಇದೀಗ ಗೋವಿನ ಹೆಸರಿನಲ್ಲಿ ಗುಂಪು ಹಲ್ಲೆ ನಡೆಸುತ್ತಿದ್ದಾರೆ. ಆದಾಗ್ಯೂ ಸರಕಾರಗಳು ಮತ್ತು ಜನಪ್ರತಿನಿಧಿಗಳು ವೌನ ತಾಳಿರುವುದು ಸರಿಯಲ್ಲ. ಗೋ ವ್ಯಾಪಾರಿಗಳ ಮನೆಗೆ ರಾತ್ರೋರಾತ್ರಿ ನುಗ್ಗಿ ಹಲ್ಲೆ ನಡೆಸುವುದು, ಅಮಾಯಕ ವ್ಯಾಪಾರಿಗಳಿಗೆ ತೊಂದರೆ ಕೊಡುವುದು ಸಾಮಾನ್ಯವಾಗಿದೆ. ಕೆಲವು ಪೊಲೀಸರು ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಗೋ ವ್ಯಾಪಾರಿಗಳನ್ನು ತೊಂದರೆಗೆ ಸಿಲುಕಿಸುತ್ತಾರೆ. ಇದರಿಂದ ಮುಸ್ಲಿಂ ಸಮುದಾಯವು ಅಭದ್ರತೆ ಒಳಗಾಗಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಎಂಡಿಸಿ ಜಿಲ್ಲಾದ್ಯಂತ ಕಾನೂನು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂಡಿಸಿ ವಕ್ತಾರ ಝಾಕಿರ್ ಹುಸೈನ್ ಅಳೇಕಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಲಿ ಹಸನ್, ವಹ್ಹಾಬ್ ಕುದ್ರೋಳಿ, ರಫೀಕ್ ಪಾಣೇಲ, ಇಮ್ತಿಯಾಝ್ ಕೋಟೆಪುರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News