×
Ad

ಮಾಲೆಗಾಂವ್ ಸ್ಫೋಟಕ್ಕೆ ಬಳಸಲಾದ ಪ್ರಜ್ಞಾ ಸಿಂಗ್ ರ ಮೋಟಾರ್ ಸೈಕಲ್ ನ್ಯಾಯಾಲಯಕ್ಕೆ

Update: 2019-07-09 14:37 IST
Photo: indianexpress.com

ಮುಂಬೈ, ಜು.9:  ಸೆಪ್ಟೆಂಬರ್ 29, 2008ರಂದು ಮಾಲೆಗಾಂವ್ ಸ್ಫೋಟಕ್ಕೆ ಸ್ಫೋಟಕಗಳನ್ನು ಇರಿಸಲು ಬಳಸಲಾಗಿದೆಯೆಂದು ತಿಳಿಯಲಾದ ಹಾಗೂ  ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಹೆಸರಿನಲ್ಲಿ ನೋಂದಣಿಗೊಂಡಿರುವ ಎಲ್‍ಎಂಎಲ್ ಫ್ರೀಡಂ ಮೋಟಾರ್ ಸೈಕಲನ್ನು ಮೊದಲ ಬಾರಿಗೆ ವಿಚಾರಣಾ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿದೆ.

ಈ ಸ್ಫೋಟದಲ್ಲಿ ಆರು ಜನರು ಮೃತಪಟ್ಟು 101 ಮಂದಿ ಗಾಯಗೊಂಡಿದ್ದರು. ಸದ್ಯ ಜಾಮೀನಿನ ಮೇಲಿರುವ ಪ್ರಜ್ಞಾ ಈಗ ಭೋಪಾಲ್ ಕ್ಷೇತ್ರದ ಸಂಸದೆಯೂ ಆಗಿದ್ದಾರೆ. ಅವರಿಗೆ ಸೇರಿದ ಈ ಮೋಟಾರ್ ಸೈಕಲ್ ಸ್ಫೋಟ ನಡೆದ ಸ್ಥಳದಲ್ಲಿ ಹಾನಿಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸ್ಥಳ ಪಂಚನಾಮೆ ನಡೆಸಿದ ಸಾಕ್ಷಿಯೊಬ್ಬರು ಸೋಮವಾರ ಅವರಿಗೆ ತೋರಿಸಲಾದ ಎಲ್‍ಎಂಎಲ್ ಫ್ರೀಡಂ ಹಾಗೂ ಹೊಂಡಾ ಯುನಿಕಾರ್ನ್ ಮೋಟಾರ್ ಸೈಕಲ್ ಗಳು ಹಾಗೂ ಇತರ ಐದು ಬೈಸಿಕಲ್ ಗಳನ್ನು ಸ್ಫೋಟದ ಸ್ಥಳದಲ್ಲಿ ಇದ್ದ ವಾಹನಗಳೆಂದು ಗುರುತಿಸಿದ್ದಾರೆ.

ಈ ಎರಡು ಮೋಟಾರ್ ಸೈಕಲ್ ಹಾಗೂ ಐದು ಬೈಸಿಕಲ್ ಗಳನ್ನು ಮೊದಲು ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ ನಂತರ ಮಹಾರಾಷ್ಟ್ರ ಎಟಿಎಸ್ ಬಳಿ ಕಳುಹಿಸಿ ಕೊಡಲಾಗಿತ್ತು.

ಮುಂಬೈ ನ್ಯಾಯಾಲಯದಲ್ಲಿ ಇವುಗಳನ್ನಿಡಲು ಸ್ಥಳಾವಕಾಶದ ಕೊರತೆಯಿಂದಾಗಿ ಅವುಗಳನ್ನು ಎಟಿಎಸ್ ನ ಕಾಲಾಚೌಕೀ ಘಟಕಕ್ಕೆ ಕಳುಹಿಸಲಾಗಿತ್ತು. ಸೋಮವಾರ ಅವುಗಳನ್ನು ನ್ಯಾಯಾಲಯಕ್ಕೆ ಟೆಂಪೋದಲ್ಲಿ ಗೋಣಿ ಚೀಲಗಳಿಂದ ಮುಚ್ಚಿ ತರಲಾಗಿತ್ತು. ಕಲಾಪ ನಡೆಯುತ್ತಿದ್ದ ಐದನೇ ಮಹಡಿಗೆ ಅವುಗಳನ್ನು ಕೊಂಡು ಹೋಗುವುದು ಅಸಾಧ್ಯವಾಗಿದ್ದರಿಂದ  ವಕೀಲರು ಹಾಗೂ ಅಭಿಯೋಜಕರನ್ನು ಅವುಗಳನ್ನು ಟೆಂಪೋದಲ್ಲಿರುವಂತೆಯೇ ಪರಿಶೀಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಸಾಕ್ಷಿ ಹಾಗೂ ನ್ಯಾಯಾಧೀಶರು ಟೆಂಪೋ ಹತ್ತಿ ಬೈಕ್ ಗಳನ್ನು ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News