ಅಣೆಕಟ್ಟು ದುರಂತ ಪ್ರಕರಣ: ಸಚಿವರ ಮನೆಗೆ ಏಡಿಗಳನ್ನು ಸುರಿದ ಪ್ರತಿಭಟನಕಾರರು

Update: 2019-07-09 14:03 GMT

ಮುಂಬೈ, ಜು.9: ಇತ್ತೀಚೆಗೆ 19 ಜನರನ್ನು ಬಲಿ ಪಡೆದ ರತ್ನಗಿರಿಯ ಜಲಾಶಯದಲ್ಲಿನ ಬಿರುಕಿಗೆ ಏಡಿಗಳು ಕಾರಣ ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಚಿವ ತಾನಾಜಿ ಸಾವಂತ್ ಮನೆಯತ್ತ ಇಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಕಾರ್ಯಕರ್ತರು ಏಡಿಗಳನ್ನು  ಎಸೆದು ಪ್ರತಿಭಟನೆ ನಡೆಸಿದ್ದಾರೆ. ಸಚಿವರ ಮನೆಗೆ ನುಗ್ಗಿದ ಕಾರ್ಯಕರ್ತರು ಒಂದು ಬುಟ್ಟಿ ಏಡಿಗಳನ್ನು ಸುರಿದಿದ್ದಾರೆ.

ಜುಲೈ 3ರಂದು ರತ್ನಗಿರಿ ಜಿಲ್ಲೆಯ 19 ವರ್ಷ ಹಳೆಯದಾದ ತಿವಾರೆ ಜಲಾಶಯದಲ್ಲಿ ಬಿರುಕುಂಟಾಗಿ ಹಲವಾರು ಗ್ರಾಮಗಳಿಗೆ ನೀರು ನುಗ್ಗಿ ಹಲವು ಮಂದಿ ಬಲಿಯಾಗಿದ್ದರು. ಜಲಾಶಯದಲ್ಲಿ ಸೋರಿಕೆಯಾಗುತ್ತಿದ್ದುದನ್ನು ಗಮನಿಸಿದ್ದ ಸ್ಥಳೀಯರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ದುರಸ್ತಿ ಕಾರ್ಯ ಕೈಗೊಳ್ಳಲಾಗಿರಲಿಲ್ಲ.

ಇಂತಹ ಜಲಾಶಯದಲ್ಲಿ ಬಿರುಕು ಕಾಣಿಸಿಕೊಂಡು ನಡೆದ ದುರ್ಘಟನೆಯ ನಂತರ ಪ್ರತಿಕ್ರಿಯಿಸಿದ್ದ ಸಚಿವ ತಾನಾಜಿ ಅದಕ್ಕೆ ಏಡಿಗಳನ್ನು ದೂರಿದ್ದರು. “ಹಿಂದೆ ಸೋರಿಕೆ ಇರಲಿಲ್ಲ. ಆದರೆ ಡ್ಯಾಂ ಸುತ್ತ ದೊಡ್ಡ ಸಂಖ್ಯೆಯ ಏಡಿಗಳಿದ್ದುದರಿಂದ ಹೀಗಾಗಿದೆ” ಎಂದು ಅವರು ಹೇಳಿದ್ದರು.

ಕಳೆದ ವಾರವಷ್ಟೇ ಎನ್‍ಸಿಪಿ ಕಾರ್ಯಕರ್ತರು ಪಕ್ಷದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಅವ್ಹದ್ ನೇತೃತ್ವದಲ್ಲಿ ನೌಪಾಡ ಪೊಲೀಸ್ ಠಾಣೆಗೆ ತಮ್ಮ ಕೈಗಳಲ್ಲಿ ಏಡಿಗಳನ್ನು ಹಿಡಿದು ತೆರಳಿ ತಮ್ಮನ್ನು ಬಂಧಿಸುವಂತೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News