ಮಕ್ಕಳಿಗೆ ಲೈಂಗಿಕ ಕಿರುಕುಳ: ವಿಶ್ವಸಂಸ್ಥೆಯ ಮಾಜಿ ಅಧಿಕಾರಿಗೆ ಜೈಲು
ಕಠ್ಮಂಡು, ಜು. 9: ನೇಪಾಳದಲ್ಲಿ ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪದಲ್ಲಿ ವಿಶ್ವಸಂಸ್ಥೆಯ ಮಾಜಿ ಅಧಿಕಾರಿಯೊಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಾನವೀಯ ಕ್ಷೇತ್ರದ ಮಾಜಿ ಉನ್ನತ ಅಧಿಕಾರಿ 62 ವರ್ಷದ ಪೀಟರ್ ಜಾನ್ ಡಾಲ್ಗ್ಲಿಶ್‌ಗೆ ಎರಡು ಪ್ರಕರಣಗಳಲ್ಲಿ ಒಂಬತ್ತು ಮತ್ತು ಏಳು ವರ್ಷಗಳ ಎರಡು ಜೈಲು ಶಿಕ್ಷೆಗಳನ್ನು ನೀಡಲಾಗಿದೆ. ಅವರ ವಿರುದ್ಧದ ಆರೋಪ ಕಳೆದ ತಿಂಗಳು ಸಾಬೀತಾಗಿತ್ತು.
12 ವರ್ಷದ ಓರ್ವ ಬಾಲಕನ ಮೇಲೆ ಲೇಂಗಿಕ ದೌರ್ಜನ್ಯ ನಡೆಸಿರುವುದಕ್ಕಾಗಿ 9 ವರ್ಷ ಹಾಗೂ 14 ವರ್ಷದ ಬಾಲಕನೊಬ್ಬನ ಮೇಲೆ ದೌರ್ಜನ್ಯ ನಡೆಸಿರುವುದಕ್ಕಾಗಿ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಶ್ವಸಂಸ್ಥೆಯ ಮಾಜಿ ಅಧಿಕಾರಿಗೆ ವಿಧಿಸಲಾಗಿದೆ ಎಂದು ನೇಪಾಳದ ಅಧಿಕಾರಿಯೊಬ್ಬರು ತಿಳಿಸಿದರು.
ನೇಪಾಳದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಕಠ್ಮಂಡು ಸಮೀಪದ ಕವ್ರೆಪಾಲನ್‌ಚೌಕ್ ಜಿಲ್ಲೆಯಲ್ಲಿ ಕಳೆದ ವರ್ಷದ ಎಪ್ರಿಲ್‌ನಲ್ಲಿ ಈ ಅಧಿಕಾರಿಯನ್ನು ಬಂಧಿಸಲಾಗಿತ್ತು.