ಬಜೆಟ್‌ನಲ್ಲಿ ಮಹಾ ಲೋಪ: 1.7 ಲಕ್ಷ ಕೋಟಿ ರೂ. ವ್ಯತ್ಯಾಸ !
ಇದು ಆತಂಕಕಾರಿ ಎಂದ ದೇಶದ ಪ್ರಪ್ರಥಮ ಅಂಕಿಅಂಶ ತಜ್ಞ ಪ್ರಣಬ್ ಸೇನ್
ಹೊಸದಿಲ್ಲಿ, ಜು.9: ಕೇಂದ್ರ ಸರಕಾರದ 2018-19ರ ಸಾಲಿನ ಆದಾಯ ಗಳಿಕೆ ಕುರಿತ ಅಂಕಿಅಂಶಗಳಲ್ಲಿ ಆರ್ಥಿಕ ಸಮೀಕ್ಷಾ ವರದಿ ಹಾಗೂ ಬಜೆಟ್ ನಡುವೆ ಅಗಾಧ ವ್ಯತ್ಯಾಸವಿರುವುದು ಇದೀಗ ಬೆಳಕಿಗೆ ಬಂದಿದೆ.
ಕೇಂದ್ರ ಸರಕಾರದ ವಿತ್ತ ಖಾತೆಯಲ್ಲಿ ನಡೆದಿರುವ ಈ ಗಂಭೀರ ಲೋಪದ ಬಗ್ಗೆ ಬಜೆಟ್ ಮಂಡನೆಯಾದ ಮೂರು ದಿನಗಳ ಬಳಿಕ ಪ್ರಶ್ನೆಗಳು ಉದ್ಭವಿಸಿವೆ.
ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ರತಿನ್ ರಾಯ್ ಅವರು ಬಜೆಟ್‌ನಲ್ಲಿರುವ ಈ ಅಸಮಂಜಸತೆಯನ್ನು ಮೊದಲಿಗೆ ಕಂಡುಹಿಡಿದವರಾಗಿದ್ದಾರೆ. ಬ್ಯುಸಿನೆಸ್ ಸ್ಟಾಂಡರ್ಡ್‌ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹಾಲಿ ಅರ್ಥಿಕ ಸಮೀಕ್ಷೆ ಹಾಗೂ ಕೇಂದ್ರ ಬಜೆಟ್‌ನ್ನು ಕೂಲಂಕಶವಾಗಿ ಅಧ್ಯಯನ ನಡೆಸಿರುವ ಅವರು ಬಜೆಟ್‌ನಲ್ಲಿ ಉಲ್ಲೇಖಿಸಿರುವ 2018-19ರ ಸಾಲಿನ ಅಂದಾಜು ಆದಾಯ, ಅಂದರೆ ಸರಕಾರವು ಸಂಪಾದಿಸಿರುವ ಆದಾಯದ ಮೊತ್ತಕ್ಕೂ, ಅರ್ಥಿಕ ಸಮೀಕ್ಷೆಗಿಂತ ಉಲ್ಲೇಖಿಸಲಾದ ಆದಾಯಕ್ಕೂ 1.7 ಲಕ್ಷ ಕೋಟಿ ರೂ. ವ್ಯತ್ಯಾಸವಿದೆ.
2018-19ರ ಸಾಲಿನಲ್ಲಿ 17.3 ಲಕ್ಷ ಕೋಟಿ ಆದಾಯ ಗಳಿಸಲಾಗಿದೆಯೆಂದು ಬಜೆಟ್‌ನಲ್ಲಿ ಬಳಸಲಾದ ಪರಿಷ್ಕೃತ ಅಂದಾಜು ಅಂಕಿಅಂಶಗಳು ತಿಳಿಸಿವೆ. ಆದರೆ ಆರ್ಥಿಕ ಸಮೀಕ್ಷೆಯಲ್ಲಿ ತೋರಿಸಲಾದ ಸರಕಾರದ ಆದಾಯ ತುಂಬಾ ಕಡಿಮೆಯಿದ್ದು, ಅದು 15.6 ಲಕ್ಷ ಕೋಟಿ ರೂ.ಗಳಾಗಿವೆ. ಅಂದರೆ 1.7 ಲಕ್ಷ ಕೋಟಿ ರೂ. ಕೊರತೆ ಕಂಡುಬಂದಿದೆ.
ಶೇಕಡಾವಾರು ಪ್ರಮಾಣದಲ್ಲಿ ಹೇಳುವುದಾದರೆ, ಬಜೆಟ್‌ನಲ್ಲಿ ತೋರಿಸಲಾದ ಪರಿಷ್ಕೃತ ಅಂದಾಜು ಆದಾಯವು 9.2 ಶೇಕಡವಾಗಿದ್ದರೆ, ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜು ಆದಾಯವು 8.2 ಶೇಕಡವೆಂದು ತೋರಿಸಲಾಗಿದೆ.
ಸರಕಾರದ ವೆಚ್ಚದಲ್ಲೂ ಬಜೆಟ್ ಹಾಗೂ ಆರ್ಥಿಕ ಸಮೀಕ್ಷೆ ನಡುವೆ ಈ ನ್ಯೂನತೆಗಳು ಕಂಡುಬಂದಿವೆ. 2018-19ರ ಸಾಲಿನಲ್ಲಿ 24.6 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆಯೆಂದು ಬಜೆಟ್‌ನಲ್ಲಿ ತೋರಿಸಲಾಗಿದೆ. ಆದರೆ ಆರ್ಥಿಕ ಸಮೀಕ್ಷೆಯಲ್ಲಿ ಸರಕಾರವು ಕೇವಲ 23.1 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ತೋರಿಸಲಾಗಿದೆ. ಅಂದರೆ 1.5 ಲಕ್ಷ ಕೋಟಿ ರೂ.ಕಡಿಮೆ ಮೊತ್ತ ಕಂಡುಬಂದಿದೆ.
ತೆರಿಗೆ ಆದಾಯದಲ್ಲಿ ಕುಸಿತ
ಕಳೆದ ವರ್ಷದ ತೆರಿಗೆಗಳಿಂದ ಸರಕಾರವು 14.8 ಲಕ್ಷ ಕೋಟಿ ರೂ.ಗಳನ್ನು ಸಂಪಾದನೆಯ ನಿರೀಕ್ಷೆ ಇತ್ತೆಂದು ಬಜೆಟ್ ಹೇಳಿದೆ. ಆದರೆ ಆರ್ಥಿಕ ಸಮೀಕ್ಷೆಯ ನೂತನ ಅಂಕಿಅಂಶಗಳು, ಕೇವಲ 13.2 ಲಕ್ಷ ಕೋಟಿ ರೂ. ಮೊತ್ತದ ತೆರಿಗೆ ಸಂಗ್ರಹವಾಗಿರುವುದನ್ನು ತೋರಿಸಿಕೊಟ್ಟಿದೆ. ಈ ಬಗ್ಗೆ ಮಾಹಿತಿ ಕೇಳಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದರೂ, ಅದಕ್ಕೆ ಯಾವುದೇ ಉತ್ತರ ಲಭಿಸಿಲ್ಲವೆಂದು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ಮೂಲಗಳು ತಿಳಿಸಿವೆ.
ಆದಾಯ ಸಂಗ್ರಹಣೆಯ ಮೊತ್ತದ ಬಗ್ಗೆ ಆರ್ಥಿಕ ಸಮೀಕ್ಷೆ ಹಾಗೂ ಬಜೆಟ್‌ನಲ್ಲಿ ತೋರಿಸಲಾದ ಅಂಕಿಅಂಶಗಳಲ್ಲಿ ವ್ಯತ್ಯಾಸವಿರುವುದು ಅತಂಕಕಾರಿಯಾದ ವಿಷಯವೆಂದು ರಾಷ್ಟ್ರೀಯ ಅಂಕಿಅಂಶ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಭಾರತದ ಪ್ರಪ್ರಥಮ ಮುಖ್ಯ ಅಂಕಿಅಂಶ ತಜ್ಞ ಪ್ರಣಬ್ ಸೇನ್ ತಿಳಿಸಿದ್ದಾರೆ.
ಆರ್ಥಿಕ ಸಮೀಕ್ಷೆಯಲ್ಲಿ ತೋರಿಸಲಾದ ಅಂಕಿಅಂಶಗಳು ನೈಜ ಅಂಕಿಅಂಶಗಳಿಗೆ ತುಂಬಾ ಸನಿಹವಾಗಿವೆ. ಆದರೆ ಬಜೆಟ್‌ನಲ್ಲಿ ತೋರಿಸಲಾದ ಅಂಕಿಅಂಶಗಳು ಅಧಿಕವಾದುದಾಗಿದೆ. ಈಗ ಉದ್ಭವಿಸಿರುವ ಸಮಸ್ಯೆಯೇನೆಂದರೆ, ಒಂದು ವೇಳೆ ನೀವು ನಿಮ್ಮ ವಿತ್ತೀಯ ಕೊರತೆಯ ನೀಗಿಸುವ ಗುರಿಯನ್ನು ತಲುಪಬೇಕಾದರೆ, ನೀವು ಬಜೆಟ್‌ನಲ್ಲಿ ಎಲ್ಲೋ ಒಂದು ಕಡೆ ನಾಟಕೀಯವಾದ ರೀತಿಯಲ್ಲಿ ಕಡಿತಗಳನ್ನು ಮಾಡಬೇಕಾಗುತ್ತದೆ. ಇದು ನಿಜಕ್ಕೂ ವಿತ್ತ ಸಚಿವಾಲಯದ ಯೋಜನೆಗಳನ್ನು ಗೊಂದಲಕ್ಕೀಡು ಮಾಡಲಿದೆಯೆಂದು ಪ್ರಣಬ್ ಸೇನ್ ಅಭಿಪ್ರಾಯಿಸಿದ್ದಾರೆ ಎಂದವರು ಹೇಳಿದ್ದಾರೆ.
‘‘ ಒಂದು ವೇಳೆ ಆರ್ಥಿಕ ಸಮೀಕ್ಷೆಯಲ್ಲಿ ಅಂಕಿಅಂಶಗಳು ಸರಿಯಾಗಿದ್ದಲ್ಲಿ ನೂತನ ಬಜೆಟ್ ಮಂಡಿಸುವುದಷ್ಟೇ ಇರುವ ಏಕೈಕ ಪರಿಹಾರವಾಗಿದೆಯೆಂದು ಜೆಎನ್‌ಯುನ ಕೇಂದ್ರ ಆರ್ಥಿಕ ಅಧ್ಯಯನ ಕೇಂದ್ರ, ಸಮಾಜ ವಿಜ್ಞಾನಗಳ ವಿದ್ಯಾಲಯದ ಪ್ರೊಫೆಸರ್ ಜಯತಿ ಘೋಷ್ ಹೇಳಿದ್ದಾರೆ.
ಇದೊಂದು ಗಂಭೀರವಾದ ಲೋಪವಾಗಿದೆ. ಒಂದು ವೇಳೆ ಇದು ಕಂಪೆನಿಯೊಂದರಲ್ಲಿ ಆಗಿದ್ದಲ್ಲಿ ಅದರ ಮುಖ್ಯ ಹಣಕಾಸು ಅಧಿಕಾರಿಯನ್ನು ಕೆಲಸದಿಂದ ಕಿತ್ತೊಗೆಯಲಾಗುತ್ತಿತ್ತು.
ಪ್ರಣಬ್ ಸೇನ್, ರಾಷ್ಟ್ರೀಯ ಅಂಕಿಅಂಶ ಆಯೋಗದ ಮಾಜಿ ಅಧ್ಯಕ್ಷ