ಜೇಟ್ಲಿ ಫೋನ್ ಕದ್ದಾಲಿಕೆ: ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಲು ಸಂಸತ್ ಪೀಠ ಸೂಚನೆ

Update: 2019-07-09 17:00 GMT

ಹೊಸದಿಲ್ಲಿ, ಜು.9: 2013ರಲ್ಲಿ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿಯವರ ಮೊಬೈಲ್ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಪೀಠ, ಸಂಸದರ ಧ್ವನಿ ದಾಖಲೆಗಳ ಅನಧಿಕೃತ ಸಂಗ್ರಹದಿಂದ ಅವರ ಕಾರ್ಯಾಚರಣೆಗೆ ತೊಡಕಾಗುವುದಾದರೆ ಅಂತಹ ಕೃತ್ಯ ಹಕ್ಕುಗಳ ನಿಂದನೆಗೆ ಸಮವಾಗುತ್ತದೆ ಎಂದು ತಿಳಿಸಿದೆ.

ಅಪರಾಧಿಯನ್ನು ಶಿಕ್ಷೆಗೆ ಗುರಿ ಮಾಡಲು ಈ ಪ್ರಕರಣದ ತನಿಖೆಯನ್ನು ಪ್ರಾಮಾಣಿಕತೆಯಿಂದ ನಡೆಸುವಂತೆ ಹಾಗೂ ನ್ಯಾಯ ಪ್ರಕ್ರಿಯೆಯ ಫಲಿತಾಂಶದ ಬಗ್ಗೆ ಮಾಹಿತಿ ನೀಡುವಂತೆ ಹಕ್ಕುಗಳ ಕುರಿತ ರಾಜ್ಯ ಸಭಾ ಸಮಿತಿ ದಿಲ್ಲಿ ಪೊಲೀಸರಿಗೆ ನಿರ್ದೇಶ ನೀಡಿದೆ. ಹಿಂದಿನ ತನ್ನ ವರದಿಯಲ್ಲಿ, ಜೇಟ್ಲಿಯವರ ಮೊಬೈಲ್ ಫೋನ್ ಕದ್ದಾಲಿಕೆ ಸಂಸದೀಯ ಹಕ್ಕುಗಳ ನಿಂದನೆಯಲ್ಲ ಎಂದು ಸಮಿತಿ ತಿಳಿಸಿತ್ತು. ಈ ವರದಿಗೆ ಪಕ್ಷಾತೀತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವರದಿಯನ್ನು ಪುನರ್‌ರಚಿಸಲಾಗಿತ್ತು.

ಸದನದ ಪ್ರಕ್ರಿಯೆಗಳ ಪ್ರಸಾರ ಮಾಡುವ ವೇಳೆ ಎಚ್ಚರಿಕೆ ವಹಿಸುವಂತೆ ಮತ್ತು ಪ್ರಕಿಯೆಗಳ ರದ್ದುಪಡಿಸಲಾದ ಭಾಗಗಳನ್ನು ಮರುಪ್ರಸಾರ ಮಾಡದಂತೆ ಟಿವಿ ವಾಹಿನಿಗಳಿಗೆ ಸೂಚನೆ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಮಿತಿ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News