ಭ್ರಷ್ಟಾಚಾರ, ಕ್ರಿಮಿನಲ್ ದುರ್ನಡತೆ ಪ್ರಕರಣ: 110 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ

Update: 2019-07-09 17:01 GMT

ಹೊಸದಿಲ್ಲಿ, ಜು. 9: ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ದುರ್ನಡತೆ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಸಿಬಿಐ 19 ರಾಜ್ಯಗಳ 110 ಸ್ಥಳಗಳಲ್ಲಿ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿದೆ.

‘‘ರಾಷ್ಟ್ರ ವ್ಯಾಪಿ ಕಾರ್ಯಾಚರಣೆಯಲ್ಲಿ ಸಿಬಿಐ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 110 ಸ್ಥಳಗಳಲ್ಲಿ ಶೋಧ ನಡೆಸಿದೆ. ಭ್ರಷ್ಟಾಚಾರ, ಕ್ರಿಮಿನಲ್ ದುರ್ನಡತೆ, ಶಸ್ತ್ರಾಸ್ತ್ರ ಸಾಗಾಟಕ್ಕೆ ಸಂಬಂಧಿಸಿದ ಸುಮಾರು 30 ಪ್ರಕರಣಗಳನ್ನು ದಾಖಲಿಸಲಾಗಿದೆ’’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

 ದಿಲ್ಲಿ, ಭರತ್‌ಪುರ, ಮುಂಬೈ, ಚಂಡಿಗಢ, ಜಮ್ಮು, ಶ್ರೀನಗರ, ಪುಣೆ, ಜೈಪುರ, ಗೋವಾ, ಕಾನ್ಪುರ, ಹೈದರಾಬಾದ್, ಮದುರೈ, ಕೋಲ್ಕತಾ, ರೂರ್ಕೆಲಾ, ರಾಂಚಿ, ಬೊಕಾರೊ, ಲಕ್ನೋ ಸೇರಿದಂತೆ ಹಲವು ನಗರಗಳಲ್ಲಿ ಹಾಗೂ ಉತ್ತರಪ್ರದೇಶ, ಉತ್ತರಾಖಂಡ, ಒಡಿಶಾ, ಹಿಮಾಚಲಪ್ರದೇಶ, ಪಂಜಾಬ್, ಹರ್ಯಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ್‌ನ ಇತರ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು 1,139 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಆರೋಪಕ್ಕೆ ಸಂಬಂಧಿಸಿ ಸಿಬಿಐ ದೇಶಾದ್ಯಂತದ 13 ಕಂಪೆನಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News