ರೋಸ್ ವ್ಯಾಲಿ ಚಿಟ್ ಫಂಡ್ ಹಗರಣ: ಬಂಗಾಳಿ ನಟ ಪ್ರಸೂನ್‌ಜಿತ್ ಚಟರ್ಜಿಗೆ ಈ.ಡಿ. ಸಮನ್ಸ್
ಹೊಸದಿಲ್ಲಿ, ಜು. 10: ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಜುಲೈ 19ರಂದು ತನ್ನ ಮುಂದೆ ಹಾಜರಾಗುವಂತೆ ಬಂಗಾಳಿ ನಟ ಪ್ರಸೂನ್‌ಜಿತ್ ಚಟರ್ಜಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಚಟರ್ಜಿ ಅವರನ್ನು ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಪ್ರಶ್ನಿಸಲಾಗುವುದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಸಲ್ಲಿಸಿದ ಪ್ರಥಮ ಮಾಹಿತಿ ವರದಿ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.
ರೋಸ್ ವ್ಯಾಲಿ ಸಮೂಹದ ಅಧ್ಯಕ್ಷ ಗೌತಮ್ ಕುಂಡು ನಡೆಸುತ್ತಿದ್ದ ರೋಸ್ ವ್ಯಾಲಿ ಪೋಂಜಿ ಯೋಜನೆ 2013ರಲ್ಲಿ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮೂಹ ವಿವಿಧ ಯೋಜನೆಗಳನ್ನು ನಡೆಸಲು 27 ಕಂಪೆನಿಗಳನ್ನು ಆರಂಭಿಸಿತ್ತು. ಪಶ್ಚಿಮಬಂಗಾಳ, ಅಸ್ಸಾಂ ಹಾಗೂ ಬಿಹಾರದ ಠೇವಣಿದಾರರಿಂದ 17,520 ಕೋಟಿ ರೂಪಾಯಿ ಸಂಗ್ರಹಿಸಿತ್ತು ಎಂದು ಆರೋಪಿಸಲಾಗಿದೆ.
ಹಗರಣದ ತನಿಖೆಯಲ್ಲಿ ಸಿಬಿಐಯೊಂದಿಗೆ ಜಾರಿ ನಿರ್ದೇಶನಾಲಯ ಕೈಜೋಡಿಸಿತ್ತು. ಕಾರ್ಯಾಚರಣೆ ನಡೆಸಿದ ಸಂದರ್ಭ ಸಮೂಹಕ್ಕೆ ಸಂಬಂಧಿಸಿದ ರೆಸೋರ್ಟ್, ಹೊಟೇಲ್‌ಗಳು ಹಾಗೂ 2,300 ಕೋಟಿ ರೂಪಾಯಿ ವೌಲ್ಯದ ಭೂಮಿ ಸಹಿತ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಅಲ್ಲದೆ, ಜ್ಯುವೆಲ್ಲರ್ಸ್ ಹೌಸ್‌ನ ಶೋರೂಮ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ದೋಷಾರೋಪಣೆಯ ದಾಖಲೆಗಳು, ಚಿನ್ನಾಭರಣಗಳು, 40 ಕೋಟಿ ರೂಪಾಯಿ ವೌಲ್ಯದ ಬೆಲೆಬಾಳುವ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿತ್ತು.