ಅಂತರ್‌ಜಾತಿ ವಿವಾಹವಾದ ದಲಿತ ವ್ಯಕ್ತಿಯ ಭೀಕರ ಹತ್ಯೆ
ಅಹ್ಮದಾಬಾದ್, ಜು.9: ಅಂತರ್‌ಜಾತಿ ವಿವಾಹವಾದ ದಲಿತ ಯುವಕನನ್ನು ಆತನ ಮೇಲ್ಜಾತಿಯ ಪತ್ನಿಯ ಸಂಬಂಧಿಕರು ಭೀಕರವಾಗಿ ಹತ್ಯೆಗೈದ ಪ್ರಕರಣ ಗುಜರಾತ್‌ನ ಅಹ್ಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
25ರ ಹರೆಯದ ಹರೇಶ್ ಸೋಲಂಕಿ ಎರಡು ತಿಂಗಳ ಗರ್ಭಿಣಿಯಾಗಿರುವ ತನ್ನ ಪತ್ನಿ ಊರ್ಮಿಳಾ ಬೆನ್‌ರನ್ನು ತನ್ನ ಜೊತೆ ಕಳುಹಿಸಿಕೊಡುವಂತೆ ಆಕೆಯ ಹೆತ್ತವರ ಮನವೊಲಿಸಲು ಅವರ ಮನೆಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದರ್ಬಾರ್ ಸಮುದಾಯಕ್ಕೆ ಸೇರಿದ ಊರ್ಮಿಳಾಬೆನ್ ರನ್ನು ಕೆಲವು ತಿಂಗಳ ಹಿಂದೆ ಆಕೆಯ ಹೆತ್ತವರ ವಿರೋಧದ ನಡುವೆಯೂ ಸೋಲಂಕಿ ಮದುವೆಯಾಗಿದ್ದರೂ ಮತ್ತು ಆಕೆಯನ್ನು ಕಚ್ ಜಿಲ್ಲೆಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಪೊಲೀಸ್ ಉಪವರಿಷ್ಠಾಧಿಕಾರಿ (ಎಸ್ಸಿ/ಎಸ್ಟಿ ಸೆಲ್) ಪಿ.ಡಿ ಮನ್ವರ್ ತಿಳಿಸಿದ್ದಾರೆ. ಆದರೆ ನಂತರ ಊರ್ಮಿಳಾರನ್ನು ಕೆಲವು ದಿನಗಳ ನಂತರ ವಾಪಸ್ ಕಳುಹಿಸುತ್ತೇವೆ ಎಂದು ಹೇಳಿ ಆಕೆಯ ಮನೆಯವರು ಆಕೆಯನ್ನು ತಮ್ಮ ಜೊತೆ ಕರೆದೊಯಿದ್ದರು.
ಆದರೆ ಎರಡು ತಿಂಗಳಾದರೂ ಊರ್ಮಿಳಾರನ್ನು ಕಳುಹಿಸದಿದ್ದಾಗ ಆತಂಕಗೊಂಡ ಸೋಲಂಕಿ ತನ್ನ ಮಾವನ ಮನೆಗಯೇ ತೆರಳಿ ಅವರನ್ನು ಒಪ್ಪಿಸಲು ನಿರ್ಧರಿಸಿದ್ದರು. ಸೋಮವಾರದಂದು ಅಭಯಂ 181 ಎಂಬ ಮಹಿಳಾ ಸಹಾಯವಾಣಿಯ ನೆರವು ಪಡೆದ ಸೋಲಂಕಿ ಅವರ ವಾಹನದಲ್ಲೇ ಪತ್ನಿಯ ಊರಾದ ವರ್ಮೊರ್‌ಗೆ ತೆರಳಿದ್ದರು. ಸೋಲಂಕಿ ವಾಹನದಲ್ಲೇ ಕುಳಿತಿದ್ದರೆ ಸಹಾಯವಾಣಿಯ ಅಧಿಕಾರಿಗಳು ಮನೆಯ ಒಳಗೆ ತೆರಳಿ ಸೋಲಂಕಿ ಪತ್ನಿಯ ಹೆತ್ತವರನ್ನು ಒಪ್ಪಿಸಲು ಪ್ರಯತ್ನಿಸಿದ್ದರು. ಈ ವೇಳೆ ಸೋಲಂಕಿ ವಾಹನದಲ್ಲಿದ್ದಾನೆ ಎನ್ನುವುದನ್ನು ಅರಿತ ಊರ್ಮಿಳಾ ಬೆನ್ ಸಂಬಂಧಿಕರು ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದರು. ಘಟನೆಯಲ್ಲಿ ತಲೆಯ ಭಾಗಕ್ಕೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಸೋಲಂಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಊರ್ಮಿಳಾ ಬೆನ್ ಹೆತ್ತವರೂ ಸೇರಿದಂತೆ ಎಂಟು ಮಂದಿಯ ವಿರುದ್ಧ ಐಪಿಸಿ ವಿಧಿ 302 (ಹತ್ಯೆ), 341 (ಸೂಕ್ತವಲ್ಲದ ತಡೆ), 353 (ಕರ್ತವ್ಯ ನಿಬಾಯಿಸದಂತೆ ಸರಕಾರಿ ಸೇವಕನ ಮೇಲೆ ಒತ್ತಡ ಅಥವಾ ಹಲ್ಲೆ), 147 (ದಂಗೆ) ವಿಧಿಯಡಿ ಮತ್ತು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.