"ಅಯೋಧ್ಯೆ ವಿವಾದ ಮಧ್ಯಸ್ಥಿಕೆ ಪ್ರಕ್ರಿಯೆ ಕೈಬಿಡಿ"

Update: 2019-07-10 03:54 GMT

ಹೊಸದಿಲ್ಲಿ, ಜು.10: ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚಿಸಿದ ಮಧ್ಯಸ್ಥಿಕೆ ಪ್ರಕ್ರಿಯೆ ಯಾವುದೇ ಫಲ ನೀಡುವ ಸಾಧ್ಯತೆ ಇಲ್ಲ. ಆದ್ದರಿಂದ ತಕ್ಷಣ ಈ ಪ್ರಕ್ರಿಯೆಯನ್ನು ಕೈಬಿಟ್ಟು, 2010ರಿಂದಲೂ ನನೆಗುದಿಗೆ ಬಿದ್ದಿರುವ ಪ್ರಕರಣದ ತೀರ್ಪು ನೀಡಬೇಕು ಎಂದು ಹಿಂದೂ ಸಮುದಾಯವನ್ನು ಪ್ರತಿನಿಧಿಸುವ ಅರ್ಜಿದಾರರೊಬ್ಬರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಅರ್ಜಿದಾರ ರಾಜೇಂದ್ರ ಸಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠದ ಮುಂದೆ ಈ ಮನವಿ ಮಾಡಿಕೊಂಡಿದ್ದು, ಸುಪ್ರೀಂಪೀಠ ವಿಚಾರಣೆಗೆ ಒಪ್ಪಿಗೆ ನೀಡಿದೆ. "ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಅನುಭವದ ಪ್ರಕಾರ ಪ್ರಕ್ರಿಯೆ ನಿರರ್ಥಕ. ಇದರಿಂದ ಕಾರ್ಯಸಾಧನೆಯಾಗದು" ಎಂದು ವಾದಿಸಲಾಗಿದೆ.

ಮಾರ್ಚ್ 8ರಂದು ಐವರು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಪೀಠ, ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಕಲೀಫುಲ್ಲಾ ನೇತೃತ್ವದ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ನೇಮಕ ಮಾಡಿತ್ತು. ಹಿರಿಯ ಮಧ್ಯಸ್ಥಿಕೆಗಾರ ಮತ್ತು ವಕೀಲ ಶ್ರೀರಾಮ್ ಪಾಂಚು ಮತ್ತು ಧಾರ್ಮಿಕ ಮುಖಂಡ ಶ್ರೀರವಿಶಂಕರ್ ಸಮಿತಿಯಲ್ಲಿದ್ದಾರೆ. ರಾಮ ಜನ್ಮಭೂಮಿ- ಬಾಬರಿ ಮಸೀದಿ ಆವರಣದ 2.77 ಎಕರೆ ಜಮೀನಿನ ಮಾಲಕತ್ವದ ಕುರಿತಂತೆ 70 ವರ್ಷಗಳಿಂದ ಇರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಂಧಾನ ಮಾತುಕತೆ ನಡೆಸುವಂತೆ ಸೂಚಿಸಲಾಗಿತ್ತು. ಈ ಸಮಿತಿ ತನ್ನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ 15ರವರೆಗೆ ಸಮಯಾವಕಾಶ ವಿಸ್ತರಿಸಲಾಗಿತ್ತು.

ರಾಜೇಂದ್ರ ಸಿಂಗ್ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಆರಾಧನೆಗೆ ಅವಕಾಶ ನೀಡಬೇಕು ಎಂದು ಕೋರಿ 1950ರಲ್ಲೇ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟಕ್ಕೆ ಚಾಲನೆ ನೀಡಿದ ಗೋಪಾಲ್ ಸಿಂಗ್ ವಿಶಾರದ್ ಅವರ ಪುತ್ರರಾಗಿದ್ದು, "ನನಗೆ ಈಗ 80 ವರ್ಷ; ತಂದೆ ಸಲ್ಲಿಸಿದ ಅರ್ಜಿಯ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇನೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News