‘ಜನಧನ’ ಖಾತೆಯಲ್ಲಿ 1 ಲಕ್ಷ ಕೋಟಿ ರೂ. ಜಮೆ: ವಿತ್ತ ಇಲಾಖೆ

Update: 2019-07-10 15:32 GMT

ಹೊಸದಿಲ್ಲಿ, ಜು.10: ಸುಮಾರು ಐದು ವರ್ಷ ಹಿಂದೆ ಮೋದಿ ನೇತೃತ್ವದ ಸರಕಾರ ಆರಂಭಿಸಿದ್ದ ಜನಧನ ಯೋಜನೆಯ ಬ್ಯಾಂಕ್ ಖಾತೆಯಲ್ಲಿ ಜಮೆಯಾದ ಮೊತ್ತ 1 ಲಕ್ಷ ಕೋಟಿ ರೂ. ಗಡಿ ದಾಟಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಜುಲೈ 3ರ ವೇಳೆಗೆ ದೇಶದಲ್ಲಿ ಪ್ರಧಾನಮಂತ್ರಿ ಜನಧನ ಯೋಜನೆ(ಪಿಎಮ್‌ಜೆಡಿವೈ)ಯ 36.06 ಕೋಟಿಗೂ ಅಧಿಕ ಖಾತೆಗಳಿದ್ದು, ಇದರಲ್ಲಿ 1,00,495.94 ಕೋಟಿ ರೂ. ಜಮೆಯಾಗಿದೆ . ಜನಧನ ಖಾತೆದಾರರಲ್ಲಿ ಶೇ.50ಕ್ಕೂ ಹೆಚ್ಚು ಮಹಿಳೆಯರು ಎಂದು ವಿತ್ತ ಸಚಿವಾಲಯ ಇತ್ತೀಚಿಗೆ ಬಿಡುಗಡೆಗೊಳಿಸಿದ ಅಂಕಿಅಂಶ ತಿಳಿಸಿದೆ. ದೇಶದ ಜನತೆಗೆ ಸಾರ್ವತ್ರಿಕ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಪಿಎಮ್‌ಜೆಡಿವೈ ಖಾತೆಯಲ್ಲಿ ಜಮೆಯಾಗುತ್ತಿರುವ ಹಣದ ಪ್ರಮಾಣ ಕ್ರಮೇಣ ಹೆಚ್ಚುತ್ತಿದ್ದು, ಜೂನ್ 6ರಂದು 99,649.84 ಕೋಟಿ ರೂ. ಜಮೆಯಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.

ಪಿಎಮ್‌ಜೆಡಿವೈಯಡಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ(ಬಿಎಸ್‌ಬಿಡಿ)ಯನ್ನು ಆರಂಭಿಸಲಾಗುತ್ತಿದೆ ಮತ್ತು ಈ ಖಾತೆಯಡಿ ರುಪೇ ಡೆಬಿಟ್‌ಕಾರ್ಡ್ ಹಾಗೂ ಓವರ್‌ಡ್ರಾಫ್ಟ್ ಸೌಲಭ್ಯವೂ ಲಭಿಸುತ್ತಿದೆ. 28.44 ಕೋಟಿ ಖಾತೆಗಳಿಗೆ ರುಪೆಕಾರ್ಡ್ ಸೌಲಭ್ಯ ಒದಗಿಸಲಾಗಿದೆ. ಬಿಎಸ್‌ಬಿಡಿ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ ಮೊತ್ತ ಇರಿಸುವ ಅಗತ್ಯವಿರುವುದಿಲ್ಲ.

   ಜನಧನ ಖಾತೆಯ ಯಶಸ್ಸಿನಿಂದ ಉತ್ಸಾಹಿತವಾಗಿರುವ ಸರಕಾರ, 2018ರ ಆಗಸ್ಟ್ 28ರ ಬಳಿಕ ಆರಂಭಿಸಲಾದ ಜನಧನ ಖಾತೆಗಳಿಗೆ ಅಪಘಾತ ವಿಮಾ ಮೊತ್ತವನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಹೆಚ್ಚಿಸಿದೆ. ಅಲ್ಲದೆ ಓವರ್‌ಡ್ರಾಫ್ಟ್ ಸೌಲಭ್ಯವನ್ನೂ ದ್ವಿಗುಣಗೊಳಿಸಿ 10 ಸಾವಿರ ರೂ.ಗೆ ಹೆಚ್ಚಿಸಿದೆ. ಅಲ್ಲದೆ ಎಲ್ಲಾ ಮನೆಗೂ ಬ್ಯಾಂಕ್‌ ಖಾತೆ ಎಂಬ ಗುರಿಯನ್ನು ಬ್ಯಾಂಕ್‌ಖಾತೆ ಹೊಂದಿರದ ಎಲ್ಲಾ ವಯಸ್ಕರಿಗೆ ಎಂದು ಬದಲಿಸಲಾಗಿದೆ. ದುರ್ಬಲ ವರ್ಗದವರಿಗೆ ಹಾಗೂ ಕಡಿಮೆ ಆದಾಯವಿರುವ ಜನರಿಗೆ ಉಳಿತಾಯ ಖಾತೆಯ ಸೌಲಭ್ಯ, ಅಗತ್ಯ ಆಧರಿಸಿ ಸಾಲ ಸೌಲಭ್ಯ, ಪಾವತಿ ಸೌಲಭ್ಯ, ವಿಮೆ ಮತ್ತು ಪಿಂಚಣಿ ಸಹಿತ ವಿವಿಧ ಆರ್ಥಿಕ ಸೇವೆಗಳನ್ನು ಲಭ್ಯವಾಗಿಸುವುದು ಜನಧನ ಖಾತೆ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಶೂನ್ಯ ಬ್ಯಾಲೆನ್ಸ್ ಖಾತೆಗಳ ಸಂಖ್ಯೆ 2018ರ ಮಾರ್ಚ್‌ನಲ್ಲಿ 5.10 ಕೋಟಿಯಿದ್ದರೆ, 2019ರ ಮಾರ್ಚ್ ನಲ್ಲಿ 5.07 ಕೋಟಿಗೆ ಇಳಿದಿದೆ ಎಂದು ಸಚಿವಾಲಯ ಇತ್ತೀಚೆಗೆ ರಾಜ್ಯಸಭೆಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News