ಕರ್ನಾಟಕ ರಾಜಕೀಯ ಬಿಕ್ಕಟ್ಟು: ರಾಜ್ಯಸಭೆಯಲ್ಲಿ ಕೋಲಾಹಲ; ಸದನ ಎರಡು ಬಾರಿ ಮುಂದೂಡಿಕೆ

Update: 2019-07-10 15:47 GMT

ಹೊಸದಿಲ್ಲಿ, ಜು.10: ಕರ್ನಾಟಕದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ಸೂತ್ರಧಾರನಾಗಿದ್ದು, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸತತ ದ್ವಿತೀಯ ದಿನವೂ ಕಲಾಪಕ್ಕೆ ಅಡ್ಡಿಯಾಗಿದೆ.

ರಾಜ್ಯಸಭೆಯಲ್ಲಿ ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಎದ್ದುನಿಂತ ಕಾಂಗ್ರೆಸ್ ಸದಸ್ಯರು ವಿಷಯ ಪ್ರಸ್ತಾವಿಸಲು ಮುಂದಾದರು. ಆದರೆ ಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರ ಕಠಿಣ ಎಚ್ಚರಿಕೆಯಿಂದ ತುಸು ಮೆತ್ತಗಾದರು. ಈ ಮಧ್ಯೆ ರಾಜ್ಯಸಭೆಯ ಮಾಜಿ ಸದಸ್ಯ ಆರ್. ರಾಮಕೃಷ್ಣನ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕಲಾಪಪಟ್ಟಿ ಓದಿ ಹೇಳುತ್ತಿದ್ದಂತೆಯೇ ಸದನದ ಬಾವಿಗೆ ನುಗ್ಗಿದ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗತೊಡಗಿದಾಗ ಸದನ ಗದ್ದಲದಲ್ಲಿ ಮುಳುಗಿತು. ನಿಯಮ 267ರಡಿ ತಮ್ಮ ವಿಷಯವನ್ನು ಮೊದಲು ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂದು ಕಪಿಲ್ ಸಿಬಲ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ನೋಟಿಸನ್ನು ಪರಿಗಣಿಸಲಾಗದು ಎಂದ ನಾಯ್ಡು, “ನಾವು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸುವುದು ಬೇಡ” ಎಂದು ಕಾಂಗ್ರೆಸ್ ಸದಸ್ಯರನ್ನುದ್ದೇಶಿಸಿ ಹೇಳಿದರು. ಆದರೂ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಮುಂದುವರಿದಾಗ, ಇಲ್ಲಿ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಲು ನೀವು ಬಿಡುತ್ತೀರಾ? ಎಂದು ನಾಯ್ಡು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

ಆಗ ಕಾಂಗ್ರೆಸ್ ಸದಸ್ಯರು ಸ್ವಸ್ಥಾನಕ್ಕೆ ಮರಳಿದರು. ಬಳಿಕ ಶೂನ್ಯ ಅವಧಿಯ ಪ್ರಶ್ನೋತ್ತರ ಆರಂಭವಾಗಿ ನಾಲ್ವರು ಸದಸ್ಯರು ತಮ್ಮ ಪ್ರಶ್ನೆ ಕೇಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಆನಂದ್ ಶರ್ಮ ಸದನಕ್ಕೆ ಆರಂಭಿಸಿದರು. ಆಗ ಮತ್ತೆ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಆರಂಭವಾಯಿತು ಮತ್ತು ಸಭಾಧ್ಯಕ್ಷರು ಮಧ್ಯಾಹ್ನದವರೆಗೆ ಕಲಾಪವನ್ನು ಮುಂದೂಡಿದರು. ಮಧ್ಯಾಹ್ನ ಪ್ರಶ್ನೋತ್ತರ ಅವಧಿಗಾಗಿ ಸದನ ಮರುಸಮಾವೇಶಗೊಂಡಾಗ ಕಾಂಗ್ರೆಸ್ ಸದಸ್ಯರು ಮತ್ತೆ ಎದ್ದುನಿಂತು ಘೋಷಣೆ ಕೂಗತೊಡಗಿದರು. ಇದು ಸರಿಯಲ್ಲ, ಪ್ರಶ್ನೋತ್ತರ ಅವಧಿ ಅತ್ಯಂತ ಮಹತ್ವದ್ದಾಗಿದೆ. ಇಡೀ ದೇಶವೇ ನಮ್ಮನ್ನು ಗಮನಿಸುತ್ತಿದೆ ಎಂದು ಸದಸ್ಯರನ್ನುದ್ದೇಶಿಸಿ ಹೇಳಿದ ವೆಂಕಯ್ಯ ನಾಯ್ಡು, ಸ್ವಸ್ಥಾನಕ್ಕೆ ಮರಳುವಂತೆ ಮಾಡಿಕೊಂಡ ವಿನಂತಿ ನಿಷ್ಪಲವಾಯಿತು.

ಡಿಫೆಕ್ಷನ್(ಪಕ್ಷಾಂತರ)ದ ಬಗ್ಗೆ ಮಾತನಾಡುತ್ತೀರಿ, ನಿಮಗೆ ಸದನದ ಬಗ್ಗೆ ಎಫೆಕ್ಷನ್(ಆದರ) ಇರಲಿ. ಪಕ್ಷಾಂತರದ ಬಗ್ಗೆ ಕರ್ನಾಟಕದ ಸ್ಪೀಕರ್ ನಿರ್ಧರಿಸುತ್ತಾರೆ. ಇಲ್ಲಿ ಅದರ ಅಗತ್ಯವಿಲ್ಲ ಎಂದು ಎಂದು ನಾಯ್ಡು ಹೇಳಿದರು. ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯ ಆನಂದಶರ್ಮ ವಿಷಯವೊಂದನ್ನು ಪ್ರಸ್ತಾವಿಸಲು ಮುಂದಾದಾಗ ಸಭಾಧ್ಯಕ್ಷರು ಅನುಮತಿ ನೀಡಲಿಲ್ಲ. ಆಗ ಮತ್ತೆ ಸದನದ ಬಾವಿಗೆ ನುಗ್ಗಿದ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗತೊಡಗಿದಾಗ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News