Breaking News: ಕಾಂಗ್ರೆಸ್ ಗೆ ಮತ್ತೊಂದು ಆಘಾತ: ವಿಪಕ್ಷ ನಾಯಕ ಸೇರಿ 10 ಶಾಸಕರು ಬಿಜೆಪಿಗೆ

Update: 2019-07-10 18:20 GMT

ಪಣಜಿ,ಜು.10: ನೆರೆಯ ರಾಜ್ಯ ಗೋವಾದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಚಂದ್ರಕಾಂತ್ ಕವಲೇಕರ್ ನೇತೃತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷ ಇಬ್ಭಾಗವಾಗಿದ್ದು 15 ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಆಡಳಿತ ಪಕ್ಷ ಬಿಜೆಪಿ ಸೇರಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವಿರೋಧ ಪಕ್ಷದ ನಾಯಕನೂ ಸೇರಿದಂತೆ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಸದ್ಯ ಬಿಜೆಪಿ ಬಲ 27ಕ್ಕೆ ಏರಿದೆ. ರಾಜ್ಯದ ಮತ್ತು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅವರು ನಮ್ಮ ಜೊತೆ ಸೇರಿದ್ದಾರೆ. ಅವರು ಯಾವುದೇ ಷರತ್ತನ್ನು ಇಟ್ಟಿಲ್ಲ. ಅವರು ಬಿಜೆಪಿಗೆ ಬೇಷರತ್ ಆಗಿ ಸೇರಿದ್ದಾರೆ ಎಂದು ತಿಳಿಸಿದ್ದಾರೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ನ ಸದಸ್ಯ ಬಲ ಐದಕ್ಕೆ ಕುಸಿದಿದೆ. ಮೂರನೇ ಎರಡು ಶಾಸಕರು ಪಕ್ಷ ತೊರೆದಿರುವ ಕಾರಣ ಅವರು ವಿಧಾನಸಭೆಯನ್ನು ತೊರೆಯುವ ಅಗತ್ಯವಿಲ್ಲ ಎಂದು ಮಾಧ್ಯಮ ವರದಿ ಮಾಡಿದೆ.

ಸದ್ಯ ಕಾಂಗ್ರೆಸ್ ಸಖ್ಯ ತೊರೆದಿರುವ ಶಾಸಕರೆಂದರೆ, ಬಾಬು ಕವಲೇಕರ್, ಬಬುಶ್ ಮೊನ್ಸೆರಟ್ಟೆ, ಅವರ ಪತ್ನಿ ಜೆನಿಫರ್ ಮೊನ್ಸೆರಟ್ಟೆ, ಟೋನಿ ಫೆರ್ನಾಂಡೀಸ್, ಫ್ರಾನ್ಸಿಸ್ ಸಿಲ್ವೇರ, ಫಿಲಿಪ್ ನೆರಿ ರಾಡ್ರಿಗಸ್, ಕ್ಲಫಸಿಯೊ, ವಿಲ್‌ಫ್ರೆಡ್ ದೇಸ, ನೀಲಕಂಠ್ ಹಲಂಕಾರ್ ಮತ್ತು ಇಸಿದೊರ್ ಫೆರ್ನಾಂಡೀಸ್. ಇವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತಿಯಲ್ಲಿ ಸ್ಪೀಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ತಿಂಗಳು ತೆಲಂಗಾಣದಲ್ಲಿ 18 ಕಾಂಗ್ರೆಸ್ ಶಾಸಕರ ಪೈಕಿ 12 ಶಾಸಕರು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಸೇರುವ ಮೂಲಕ ಕಾಂಗ್ರೆಸ್‌ಗೆ ಆಘಾತ ನೀಡಿದ್ದರು.

ಸದ್ಯ ಕರ್ನಾಟಕದಲ್ಲೂ ಮೈತ್ರಿ ಸರಕಾರದ 18 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಭವಿಷ್ಯ ಡೋಲಾಯಮಾನವಾಗಿದೆ. ಕರ್ನಾಟಕ ಕಾಂಗ್ರೆಸ್ ನಾಯಕರು ಶಾಸಕರ ಮನವೊಲಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದು ಇಡೀ ವಿದ್ಯಾಮಾನ ರಾಜ್ಯದಲ್ಲಿ ಆಡಳಿತಯಂತ್ರ ಸ್ಥಗಿತಗೊಳ್ಳುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News