ಉ.ಪ್ರ. ಮರಳುಗಾರಿಕೆ ಹಗರಣ: ಸಿಬಿಐನಿಂದ ಮಾಜಿ ಸಚಿವ ಪ್ರಜಾಪತಿ, ನಾಲ್ವರು ಐಎಎಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್

Update: 2019-07-10 16:19 GMT

ಹೊಸದಿಲ್ಲಿ, ಜು.10: ಉತ್ತರಪ್ರದೇಶದ ಮರಳುಗಾರಿಕೆ ಹಗರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ನಾಲ್ವರು ಐಎಎಸ್ ಅಧಿಕಾರಿಗಳು ಹಾಗೂ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರನ್ನು ಆರೋಪಿಗಳೆಂದು ಹೆಸರಿಸಿದ್ದು, ಅವರ ವಿರುದ್ಧ ಎರಡು ಹೊಸ ಪ್ರಕರಣಗಳನ್ನು ದಾಖಲಿಸಿದೆ. ಹಗರಣಕ್ಕೆ ಸಂಬಂಧಿಸಿ ರಾಜ್ಯದ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಸಿಬಿಐ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಹಿಂದಿನ ಸಮಾಜವಾದಿ ಪಕ್ಷ ಸರಕಾರದಲ್ಲಿ ಸಚಿವರಾಗಿದ್ದ ಪ್ರಜಾಪತಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಜೀವೇಶ್ ನಂದನ್, ವಿಶೇಷ ಕಾರ್ಯದರ್ಶಿ ಸಂತೋಷ್ ಕುಮಾರ್, ಆಗಿನ ಜಿಲ್ಲಾ ಮ್ಯಾಜಿಸ್ಟ್ರೇಟರುಗಳಾದ ಅಭಯ್ ಹಾಗೂ ವಿವೇಕ್ ಅವರನ್ನು ಆರೋಪಿಗಳೆಂದು ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಿದೆ.

ಹಿಂದಿನ ಉತ್ತರಪ್ರದೇಶ ಸರಕಾರವು ಮರಳುಗಾರಿಕೆಯನ್ನು ಹೊಸದಾಗಿ ಲೀಸ್‌ ಹಾಗೂ ಟೆಂಡರ್‌ಗೆ ನೀಡಲು 2012ರ ಮೇ 31ರಂದು ಇ-ಟೆಂಡರ್ ಕರೆದಿತ್ತು. ರಾಜ್ಯ ಸರಕಾರದ ಈ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ 2013ರ ಜನವರಿ 29ರಂದು ಎತ್ತಿಹಿಡಿದಿತ್ತು.

ಈ ಪ್ರಕರಣದಲ್ಲಿ ಫಲಾನುಭವಿಗಳಾದ ಶಿವಸಿಂಗ್ ಹಾಗೂ ಸುಖರಾಜ್ ಅವರು ಸಚಿವ ಪ್ರಜಾಪತಿಯವರ ಪ್ರಭಾವವನ್ನು ಬಳಸಿಕೊಂಡು, ಮರಳುಗಾರಿಕೆ ಲೀಸಿಂಗ್‌ನ್ನು ನವೀಕರಣಗೊಳಿಸಿದ್ದಾರೆಂದು ಸಿಬಿಐ ಆಪಾದಿಸಿದೆ. ಜೀವೇಶ್ ನಂದನ್ ಹಾಗೂ ಆಗಿನ ಫತೇಹ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಯ್ ಅವರು ಸಚಿವ ಪ್ರಜಾಪತಿ ಜೊತೆ ಕೈಜೋಡಿಸಿ, ಸುಖರಾಜ್‌ನ ಮರಳುಗಾರಿಕೆಯ ಲೀಸ್ 2014ರಲ್ಲಿ ನವೀಕರಣಗೊಳ್ಳುವಂತೆ ಮಾಡಿದ್ದರು. ಶಿವಸಿಂಗ್ 2012ರಲ್ಲಿ ತನ್ನ ಲೀಸ್ ನವೀಕರಣ ಗೊಳಿಸುವಲ್ಲಿ ಸಫಲನಾಗಿದ್ದ ಎಂದು ಸಿಬಿಐ ಆರೋಪಿಸಿದೆ.

ರಾಜ್ಯ ಸರಕಾರದ ಇ-ಟೆಂಡರಿಂಗ್ ನೀತಿಯನ್ನು ಉಲ್ಲಂಘಿಸಿ ಈ ಲೀಸನ್ನು ನವೀಕರಣಗೊಳಿಸಲಾಗಿದೆ ಎಂದು ಸಿಬಿಐ ಆಪಾದಿಸಿದೆ.

 ಇನ್ನೊಂದು ಪ್ರಕರಣದಲ್ಲಿ, ಶರದ್ ಯಾದವ್ ಎಂಬಾತನ ಮರಳುಗಾರಿಕೆಯ ಲೀಸಿಂಗ್‌ನ್ನು ನವೀಕರಣಗೊಳಿಸುವುದಕ್ಕಾಗಿ ದೇವರಿಯಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹುದ್ದೆಗೆ ವಿವೇಕ್‌ರನ್ನು ನಿಯೋಜಿಸಲಾಗಿತ್ತು ಎಂದು ಸಿಬಿಐ ದೂರಿದೆ.

ಲೀಸ್ ನವೀಕರಣಕ್ಕಾಗಿ ಶರದ್‌ಯಾದವ್ ಸಲ್ಲಿಸಿದ ಅರ್ಜಿಯನ್ನು 2013ರ ಎಪ್ರಿಲ್ 5ರಂದು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ಆದಾಗ್ಯೂ ಮಾರನೆಯ ದಿನವೇ ಆತ ವಿವೇಕ್ ಹಾಗೂ ಜಿಲ್ಲೆಯ ಇತರ ಅಧಿಕಾರಿಗಳ ಜೊತೆ ಸಂಚು ಹೂಡಿ ಲೀಸಿಂಗ್ ನವೀಕರಣಗೊಳ್ಳುವಂತೆ ಮಾಡಿದ್ದಾನೆಂದು ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿಸಿದೆ.

ಹಗರಣಕ್ಕೆ ಸಂಬಂಧಿಸಿ ಲಕ್ನೋ, ಬುಲಂದಶಹರ್, ಫತೇಹ್‌ಪುರ, ಅಝಂಘರ್, ಅಲಹಾಬಾದ್, ನೊಯ್ಡೋ, ಗೋರಖ್‌ಪುರ, ದೇವರಿಯಾ ಸೇರಿದಂತೆ ರಾಜ್ಯದ 12 ಸ್ಥಳಗಳಲ್ಲಿ ಸಿಬಿಐ ಮಂಗಳವಾರ ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು.

ಅಭಯ್‌ನ ನಿವಾಸದಿಂದ 47 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, 10 ಲಕ್ಷ ರೂ.ಗಳನ್ನು ದೇವಿಶರಣ್ ಉಪಾಧ್ಯಾಯ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ. ಪ್ರಸಕ್ತ ಅಝಂಘರ್‌ನ ಸಿಡಿಓ ಆಗಿ ನಿಯೋಜಿತರಾಗಿರುವ ಉಪಾಧ್ಯಾಯ್ ಅವರ ನಿವಾಸದಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News