ಗಾಯಕ ಹನಿ ಸಿಂಗ್ ವಿರುದ್ಧ ದೂರು ಸಲ್ಲಿಸಿದ ಬಳಿಕ ಬೆದರಿಕೆ ಕರೆಗಳು:ಮನೀಷಾ ಗುಲಾಟಿ

Update: 2019-07-10 16:27 GMT

 ಚಂಡಿಗಡ,ಜು.10: ಹಾಡಿನಲ್ಲಿ ಅಶ್ಲೀಲ ಪದಗಳನ್ನು ಬಳಸಿದ್ದಕ್ಕಾಗಿ ರ್ಯಾಪ್ ಗಾಯಕ ಹನಿ ಸಿಂಗ್ ವಿರುದ್ಧ ತಾನು ದೂರನ್ನು ಸಲ್ಲಿಸಿದ ಬಳಿಕ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನಾ ಸಂದೇಶಗಳನ್ನು ಹರಿಬಿಡಲಾಗುತ್ತಿದೆ ಎಂದು ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಷಾ ಗುಲಾಟಿ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 ‘ಮಖ್ನಾ’ ಹಾಡಿನಲ್ಲಿ ಅಶ್ಲೀಲ ಸಾಲುಗಳನ್ನು ಬಳಸಿದ್ದಕ್ಕಾಗಿ ಯೋ ಯೋ ಹನಿ ಸಿಂಗ್ ಮತ್ತು ಸಂಗೀತ ಸಂಯೋಜಕ ಟಿ-ಸಿರೀಸ್‌ನ ಭೂಷಣ ಕುಮಾರ ವಿರುದ್ಧ ಪಂಜಾಬ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾನು ಯಾರಿಗೂ ಹೆದರುವುದಿಲ್ಲ ಮತ್ತು ಇಂತಹ ವಿಷಯಗಳ ವಿರುದ್ಧ ಧ್ವನಿಯೆತ್ತುವುದನ್ನು ಮುಂದುವರಿಸುತ್ತೇನೆ ಎಂದ ಗುಲಾಟಿ, ಮುಂದಿನ ಕ್ರಮಕ್ಕಾಗಿ ಇದನ್ನು ತಾನು ಪೊಲೀಸರಿಗೆ ವರದಿ ಮಾಡಿದ್ದೇನೆ ಎಂದರು.

 ಸಾಧ್ಯವಾದಷ್ಟು ಶೀಘ್ರ ಸಿಂಗ್ ಅವರನ್ನು ಬಂಧಿಸುವಂತೆಯೂ ತಾನು ಪೊಲೀಸರಿಗೆ ಆಗ್ರಹಿಸಿದ್ದೇನೆ. ಇದು ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸುವ ಸಿಂಗ್‌ರಂತಹ ಗಾಯಕರಿಗೆ ಪಾಠವಾಗಬೇಕು. ಇಂತಹುದು ಪುನರಾವರ್ತನೆಯಾಗದಂತೆ ಮಹಿಳಾ ಆಯೋಗವು ಇತರ ಗಾಯಕರ ಮೇಲೂ ಕಣ್ಣಿಡಲಿದೆ ಎಂದ ಅವರು, ಸಿಂಗ್ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಆಯೋಗವು ಅದನ್ನು ವಿರೋಧಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News