ಆಂಧ್ರದಲ್ಲಿ 5 ವರ್ಷಗಳಲ್ಲಿ 1,513 ರೈತರ ಆತ್ಮಹತ್ಯೆ

Update: 2019-07-10 16:39 GMT

ಅಮರಾವತಿ, ಜು.10: 2014ರಿಂದ 2019ರವರೆಗೆ ಆಂಧ್ರಪ್ರದೇಶದಲ್ಲಿ ಒಟ್ಟು 1513 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆದರೆ ಕೇವಲ 391 ಕುಟುಂಬಗಳಿಗೆ ಮಾತ್ರವೇ ಪರಿಹಾರಧನ ಪಾವತಿಸಲಾಗಿದೆಯೆಂದು ಮುಖ್ಯಮಂತ್ರಿ ವೈ.ಎಸ್.ಜಗನ್‌ರೆಡ್ಡಿ ಬುಧವಾರ ತಿಳಿಸಿದ್ದಾರೆ.

ರಾಜ್ಯದ ಮುಖ್ಯ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರ ಜೊತೆ ನಡೆಸಿದ ವಿಡಿಯೋಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ಈ ವಿವರವನ್ನು ನೀಡಿದ್ದಾರೆ.

ಜಿಲ್ಲಾ ಅಪರಾಧ ದಾಖಲೆಗಳ ಇಲಾಖೆಗಳಿಂದ ಲಭ್ಯವಾದ ಈ ಮಾಹಿತಿಗಳನ್ನು ದೃಢಪಡಿಸಿಕೊಳ್ಳುವಂತೆ ಜಗನ್‌ರೆಡ್ಡಿ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು ಹಾಗೂ ಎಲ್ಲಾ ಅರ್ಹ ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಪರಿಹಾರಧನವನ್ನು ವಿಸ್ತರಿಸುವಂತೆ ಅವರು ಸೂಚಿಸಿದರು.

‘‘ಸ್ಥಳೀಯ ಶಾಸಕರ ಜೊತೆಗೂಡಿ ಸಂತ್ರಸ್ತ ಕುಟುಂಬಗಳಿಗೆ ಬಳಿಗೆ ತೆರಳಿ ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ. ಪ್ರತಿಯೊಂದು ಕುಟುಂಬಕ್ಕೂ ಸರಕಾರದ ವತಿಯಿಂದ ಏಳು ಲಕ್ಷ ರೂ. ಪರಿಹಾರಧನವನ್ನು ಪಾವತಿಸಿ. ಪರಿಹಾರಧನವು ಅನ್ಯರ ಕೈ ಸೇರುವುದನ್ನು ತಡೆಯಲು ಶಾಸನವೊಂದನ್ನು ಜಾರಿಗೊಳಿಸಲಾಗುವುದು’’ ಎಂದು ಜಗನ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ತನ್ನದು ಮಾನವೀಯತೆಯಿಂದ ಕೂಡಿದ ಜನತಾ ಸರಕಾರವಾಗಿದ್ದು, ಆ ನೀತಿ ಯನ್ನು ಆಡಳಿತ ವ್ಯವಸ್ಥೆಯು ಪ್ರತಿಬಿಂಬಿಸಬೇಕಾಗಿದೆಯೆಂದು ಜಗನ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News