ದಲಿತ ಯುವಕನನ್ನು ವಿವಾಹವಾದದ್ದಕ್ಕೆ ಗೂಂಡಾಗಳನ್ನು ಛೂಬಿಟ್ಟ ಬಿಜೆಪಿ ಶಾಸಕ: ಪುತ್ರಿಯ ಆರೋಪ

Update: 2019-07-11 07:20 GMT

ಹೊಸದಿಲ್ಲಿ, ಜು.11: ದಲಿತ ಯುವಕನನ್ನು ತಾನು ವಿವಾಹವಾಗಿದ್ದೇನೆಂಬ ಕಾರಣಕ್ಕೆ ತಮ್ಮ ತಂದೆ ತಮ್ಮ ಹಿಂದೆ ಗೂಂಡಾಗಳನ್ನು ಛೂ ಬಿಟ್ಟಿದ್ದಾರೆಂದು ಆರೋಪಿಸಿ ಪೊಲೀಸ್ ರಕ್ಷಣೆ ಕೋರಿ ಬರೇಲಿಯ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ತಮ್ಮ ತಂದೆ ಹಾಗೂ ಸೋದರನ ಅಡ್ಡ ಹೆಸರುಗಳಾದ ಪಪ್ಪು ಭರ್ತೌಲ್ ಹಾಗೂ ವಿಕ್ಕಿ ಭರ್ತೌಲ್ ಇವುಗಳನ್ನು ಸಾಕ್ಷಿ ಉಲ್ಲೇಖಿಸಿದ್ದಾರೆ.

“ಮಾನ್ಯ ಶಾಸಕ ಪಪ್ಪು ಭರ್ತೌಲ್ ಜಿ ಹಾಗೂ ವಿಕ್ಕಿ ಭರ್ತೌಲ್ ಜಿ, ದಯವಿಟ್ಟು ನೀವೂ ಬದುಕಿ ನಮ್ಮನ್ನು ಶಾಂತಿಯಿಂದ ಬದುಕಲು ಬಿಡಿ. ನನಗೆ ನಿಜವಾಗಿಯೂ ಮದುವೆಯಾಗಿದೆ, ನಾನು ಫ್ಯಾಶನ್‍ಗಾಗಿ ಸಿಂಧೂರ ಧರಿಸಿಲ್ಲ” ಎಂದು ಸಾಕ್ಷಿ ಹೇಳುತ್ತಿರುವಾಗ ಆಕೆಯ ಪತಿಯೆಂದು ತಿಳಿಯಲಾದ ಹಾಗೂ ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಕೂಡ ಕಾಣಿಸುತ್ತಾನೆ.

ಸಾಕ್ಷಿ ಮಿಶ್ರಾ ಕಳೆದ ವಾರ ಅಜಿತೇಶ್ ಕುಮಾರ್ ಎಂಬಾತನನ್ನು ವರಿಸಿದ್ದಾಳೆಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

“ಪಾಪಾ, ನೀವು  ರಾಜೀವ್ ರಾಣಾ ಅವರಂತೆಯೇ ನಮ್ಮ ಹಿಂದೆ ಗೂಂಡಾಗಳನ್ನು ಕಳುಹಿಸಿದ್ದೀರಿ. ನನಗೆ ಸಾಕಾಗಿ ಹೋಗಿದೆ....  ಅಡಗಿ ಕುಳಿತು ಸಾಕಾಗಿ ಹೋಗಿದೆ, ನಮ್ಮ ಜೀವ ಅಪಾಯದಲ್ಲಿದೆ ಅಭಿ ಮತ್ತಾತನ ಸಂಬಂಧಿಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿ ನನಗೆ ಸಂತೋಷದಿಂದ ಸ್ವತಂತ್ರವಾಗಿರಬೇಕಿದೆ. ಭವಿಷ್ಯದಲ್ಲಿ ನನಗೆ, ಅಭಿ ಅಥವಾ ಆತನ ಕುಟುಂಬಕ್ಕೇನಾದರೂ ಅಪಾಯವಾದರೆ ಅದಕ್ಕೆ ವಿಕ್ಕಿ ಭರ್ತೌಲ್ ಹಾಗೂ ರಾಜೀವ್ ರಾಣಾ ಜವಾಬ್ದಾರರಾಗುತ್ತಾರೆ. ನನ್ನ ತಂದೆಗೆ ಸಹಾಯ ಮಾಡುತ್ತಿರುವವರು ಅವರಿಗೆ  ಸಹಾಯ ಮಾಡುವುದನ್ನು ನಿಲ್ಲಿಸಿ, ನಮ್ಮ ಜೀವಗಳು ಅಪಾಯದಲ್ಲಿವೆ,'' ಎಂದು ವೀಡಿಯೋದಲ್ಲಿ ಸಾಕ್ಷಿ ಮನವಿ ಮಾಡಿದ್ದಾರೆ.

ಇನ್ನೊಂದು ವೀಡಿಯೋದಲ್ಲಿ ಆಕೆ ಪೊಲೀಸ್ ರಕ್ಷಣೆ ಕೋರಿದ್ದಾರೆ.

ಆದರೆ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. “ನನ್ನ ಪುತ್ರಿ ಸ್ವತಂತ್ರಳಾಗಿದ್ದಾಳೆ. ಆಕೆ ತನ್ನ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ನಾನು ಯಾವುದೇ ಬೆದರಿಕೆಯೊಡ್ಡಿಲ್ಲ. ನನ್ನ ಕುಟುಂಬದ ಸದಸ್ಯರು ಯಾ ನನ್ನೊಂದಿಗೆ ಕೆಲಸ ಮಾಡುವವರೂ ಯಾರನ್ನೂ ಕೊಲ್ಲುವ ಬೆದರಿಕೆಯೊಡ್ಡಿಲ್ಲ, ನನ್ನ ಹಾಗೂ ನನ್ನ ಕುಟುಂಬ ತನ್ನ ಕೆಲಸದಲ್ಲಿ ವ್ಯಸ್ತವಾಗಿದೆ'' ಎಂದು ಶಾಸಕ ಹೇಳಿಕೊಂಡಿದ್ದಾರೆ.

“ಸಾಕ್ಷಿ ಮಿಶ್ರಾ ವೀಡಿಯೋಗಳ ಬಗ್ಗೆ ತಮಗೆ ತಿಳಿದಿದೆ ಆದರೆ ಆಕೆ ಎಲ್ಲಿದ್ದಾರೆಂದು ಪೊಲೀಸರಿಗೆ ತಿಳಿದಿಲ್ಲ” ಎಂದು  ಡಿಐಜಿ ಆರ್ ಕೆ ಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News