ಕ್ಯಾಂಪ್ಕೋದಿಂದ ಅಡಿಕೆ ಬೆಳೆಗಾರರು ಆರ್ಥಿಕ ಸಂಪನ್ನ: ಏರ್ಯ ಲಕ್ಷ್ಮೀ ನಾರಾಯಣ ಆಳ್ವ

Update: 2019-07-11 08:10 GMT

ಮಂಗಳೂರು, ಜು.11: ವ್ಯಾಪಾರಿಗಳ ಕಪಿಮುಷ್ಟಿಯಲ್ಲಿದ್ದ ಅಡಿಕೆ ವ್ಯಾಪಾರಸ್ಥರನ್ನು ಸ್ವತಂತ್ರವನ್ನಾಗಿಸಿ ಅಡಿಕೆ ಬೆಳೆಗಾರರನ್ನು ಆರ್ಥಿಕ ಸಂಪನ್ನರಾಗಿಸುವಲ್ಲಿ ಕ್ಯಾಂಪ್ಕೋ ಕೊಡುಗೆ ಮಹತ್ತರವಾದುದು ಎಂದು ಹಿರಿಯ ಸಾಹಿತಿ, ಸಹಕಾರಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಬಂದರಿನ ಕ್ಯಾಂಪ್ಕೋ ಕಚೇರಿಯಲ್ಲಿ ಕ್ಯಾಂಪ್ಕೋ ದಿನ (ಸಂಸ್ಥಾಪನಾ ದಿನ)ವನ್ನು ಉದ್ಘಾಟಿಸಿ ಮಾತನಾಡಿದರು.

1973ರಲ್ಲಿ ವಾರಣಾಸಿ ಸುಬ್ರಾಯ ಭಟ್‌ರವರು ಆರಂಭಿಸಿದ ಕ್ಯಾಂಪ್ಕೋ ಇಂದಿಗೂ ಕಳಂಕರಹಿತವಾಗಿ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಅವರು, ಸಾರ್ವಜನಿಕ ಬದುಕು ಹೊಲಸಾಗಿ ಹೋಗುತ್ತಿರುವ ಸಂದರ್ಭದಲ್ಲಿ, ನಾವು ಹಿಂದೆ ಕಟ್ಟಿದ ಸಂಸ್ಥೆಗಳೂ ಅದೇ ಮಟ್ಟಿಗೆ ಇಳಿಯುತ್ತಿರುವ ಹೊತ್ತಿನಲ್ಲಿ ಕ್ಯಾಂಪ್ಕೋ ಮಾತ್ರ ತನ್ನ ಉದಾತ್ತ ಧ್ಯೇಯಗಳೊಂದಿಗೆ ಮುಂದುವರಿಯುತ್ತಿದೆ ಎಂದರು.

ಸಹಕಾರಿ ಕ್ಷೇತ್ರ ಲಾಭಕ್ಕಾಗಿ ಇರುವ ಸಂಸ್ಥೆ ಅಲ್ಲ ಎಂದು ಕಿವಿಮಾತು ಹೇಳಿದ ಅವರು, ಸದಸ್ಯರ ಹಿತರಕ್ಷಣೆಗಾಗಿ ಪ್ರಾಮಾಣಿಕತೆ ಯಿಂದ ಕಾರ್ಯವನ್ನು ನಿರ್ವಹಿಸಬೇಕು. ಎಲ್ಲರನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕ್ಯಾಂಪ್ಕೋದ ಪ್ರಥಮ ವ್ಯವಸ್ಥಾಪಕ ನಿರ್ದೇಶಕ ಜಿ.ಕೆ. ಸಂಗಮೇಶ್ವರ ಅವರು ದಿಕ್ಸೂಚಿ ಭಾಷಣ ಮಾಡಿ, 25 ಲಕ್ಷ ರೂ.ಗಳ ಸಾಲದ ಹಣದೊಂದಿಗೆ ಅಡಿಕೆ ಹರಾಜು ಆರಂಭಿಸಿದ ಕ್ಯಾಂಪ್ಕೋ ಸಂಸ್ಥೆ ಇಂದು ಸುಮಾರು 2 ಸಾವಿರ ಕೋಟಿ ರೂ.ಗಳ ವ್ಯವಹಾರವನ್ನು ನಡೆಸುತ್ತಿರುವ ಮಟ್ಟಿಗೆ ತಲುಪಿರುವುದು ಹೆಮ್ಮೆಯ ವಿಚಾರ ಎಂದರು.

ಕ್ಯಾಂಪ್ಕೋ ನೌಕರರ ನಿವೃತ್ತಿ ವಯಸ್ಸು 60ಕ್ಕೇರಿಸಲು ಸಲಹೆ

ದೇಶದ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ನೌಕರರ ನಿವೃತ್ತಿ ವಯಸ್ಸು 60 ಆಗಿದ್ದರೂ, ಕ್ಯಾಂಪ್ಕೋದಲ್ಲಿ ಮಾತ್ರ 58 ವರ್ಷಗಳು. ಈ ಬಗ್ಗೆ ಪ್ರಸಕ್ತ ಅಧ್ಯಕ್ಷರು ಗಮನಹರಿಸಿ ನಿವೃತ್ತಿ ವಯಸ್ಸು ಏರಿಕೆ ಮಾಡುವ ಮೂಲಕ ನೌಕರರ ಸೇವೆಯನ್ನು ಪರಿಗಣಿಸಬೇಕು ಎಂದು ಜಿ.ಕೆ. ಸಂಗಮೇಶ್ವರ್ ಸಲಹೆ ನೀಡಿದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿ.ವಿ. ಭಟ್ ಮೊದಲಾದವರು ಉಪಸ್ಥಿತರಿದ್ದರು.

ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News