ಆರ್ ಟಿಐ ಕಾರ್ಯಕರ್ತನ ಕೊಲೆ ಪ್ರಕರಣ: ಬಿಜೆಪಿ ಮಾಜಿ ಸಂಸದನಿಗೆ ಜೀವಾವಧಿ

Update: 2019-07-11 15:57 GMT

ಗಾಂಧೀನಗರ, ಜು.11: 2010ರಲ್ಲಿ ನಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಅಮಿತ್ ಜೇಥ್ವ ಕೊಲೆ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಂಸದ ದೀನು ಸೋಳಂಕಿ ಹಾಗೂ ಇತರ ಆರು ಮಂದಿಗೆ ಅಹಮದಾಬಾದ್ ನಗರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಲ್ಲದೆ ಎಲ್ಲಾ 7 ಮಂದಿ ಆಪಾದಿತರೂ ತಲಾ 60 ಲಕ್ಷ ರೂ. ದಂಡ ವಿಧಿಸಬೇಕು. ಇದರಲ್ಲಿ 11 ಲಕ್ಷ ರೂ.ಯನ್ನು ಅಮಿತ್ ಜೇಥ್ವಾನ ಕುಟುಂಬ ಸದಸ್ಯರ ಹೆಸರಲ್ಲಿ ಠೇವಣಿಯಾಗಿ ಇಡಬೇಕು . ಈ 11 ಲಕ್ಷ ರೂ. ಮೊತ್ತದಲ್ಲಿ 5 ಲಕ್ಷ ರೂ. ಹಣ ಅಮಿತ್ ಜೇಥ್ವನ ಪತ್ನಿಗೆ ಮತ್ತು ಎರಡು ಮಕ್ಕಳಿಗೆ ತಲಾ 3 ಲಕ್ಷ ರೂ. ಸಲ್ಲುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ವಿಚಾರಣೆ ವೇಳೆ 195 ಸಾಕ್ಷಿಗಳಲ್ಲಿ 105 ಸಾಕ್ಷಿಗಳು ಪ್ರತಿಕೂಲ ಸಾಕ್ಷಿ ನೀಡಿದ್ದು ಇವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವಂತೆಯೂ ಸೂಚಿಸಿದೆ.

ದೀನು ಸೋಳಂಕಿ, ಆತನ ಸೋದರಳಿಯ ಶಿವ ಸೋಳಂಕಿ, ಸಂಜಯ್ ಚೌಹಾಣ್, ಶೈಲೇಶ್ ಪಾಂಡ್ಯ, ಪಚನ್ ದೇಸಾ, ಉದಜಿ ಥಕೋರೆ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಬಹಾದುರ್‌ಸಿನ್ಹ ವದೇರ್ ಜೀವಾವಧಿ ಶಿಕ್ಷೆಗೆ ಗುರಿಯಾದವರು.

ಗಿರ್ ಅರಣ್ಯ ಪ್ರದೇಶದ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಜೇಥ್ವ ಹೋರಾಟ ಆರಂಭಿಸಿದ್ದರು. ಇಲ್ಲಿ ಸೋಳಂಕಿ ಹಾಗೂ ಕುಟುಂಬದವರು ಸುಣ್ಣದಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಇದನ್ನು ಪ್ರಶ್ನಿಸಿ ಜೇಥ್ವ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.

2010ರ ಜುಲೈ 20ರಂದು ಅಮಿತ್ ಜೇಥ್ವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಆರಂಭಿಕ ತನಿಖೆ ನಡೆಸಿದ್ದ ಅಹ್ಮದಾಬಾದ್ ಪೊಲೀಸ್‌ನ ಕ್ರೈಂಬ್ರಾಂಚ್ ವಿಭಾಗ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಸೋಳಂಕಿ ಹೆಸರು ಇರಲಿಲ್ಲ. ಆದರೆ ಬಳಿಕ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಸೋಳಂಕಿ ಪ್ರಮುಖ ಆರೋಪಿ ಎಂದು ಹೆಸರಿಸಿ 2013ರಲ್ಲಿ ದಿಲ್ಲಿಯಲ್ಲಿ ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News