ಏರ್ ಇಂಡಿಯಾ ಹೂಡಿಕೆ ಹಿಂದೆಗೆತಕ್ಕೆ ಸರಕಾರ ಬದ್ಧ: ಹರ್ದೀಪ್ ಸಿಂಗ್

Update: 2019-07-11 15:46 GMT

ಹೊಸದಿಲ್ಲಿ, ಜು.11: ಏರ್ ಇಂಡಿಯಾದಿಂದ ಹೂಡಿಕೆ ಹಿಂದೆಗೆತಕ್ಕೆ ಸರಕಾರ ಬದ್ಧವಾಗಿದೆ. ಆದರೆ ಈ ರಾಷ್ಟ್ರೀಯ ಸಾರಿಗೆಯು ಭಾರತೀಯರ ವಶದಲ್ಲಿರಬೇಕೆಂಬ ಇಚ್ಛೆ ಸರಕಾರದ್ದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಏರ್ ಇಂಡಿಯಾ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಾಲದ ಹೊರೆ ನಿರ್ವಹಿಸಲಾಗದಷ್ಟು ಪ್ರಮಾಣಕ್ಕೆ ಹೆಚ್ಚಿದೆ ಎಂದರು. ದೇಶದ ವಾಯುಯಾನ ಕ್ಷೇತ್ರದ ಬಗ್ಗೆ ಉಲ್ಲೇಖಿಸಿದ ಅವರು, ಎಪ್ರಿಲ್ ತಿಂಗಳು ಹೊರತುಪಡಿಸಿ ಉಳಿದಂತೆ ಮಾರುಕಟ್ಟೆ ವಾರ್ಷಿಕ ಸರಾಸರಿ ಶೇ.17ರಷ್ಟು ಅಭಿವೃದ್ಧಿಯಾಗಿದೆ ಎಂದರು.

ಎಪ್ರಿಲ್‌ನಲ್ಲಿ ಜೆಟ್ ಏರ್‌ವೇಸ್ ಕಾರ್ಯಾಚರಣೆ ಸ್ಥಗಿತಗೊಳಿಸಿದ ಸಂದರ್ಭ ದೇಶದಲ್ಲಿ 540 ವಿಮಾನಗಳಿದ್ದು, ಈಗ ಈ ಸಂಖ್ಯೆ ಸುಮಾರು 580ಕ್ಕೆ ತಲುಪಿದೆ. ಪ್ರತೀ ತಿಂಗಳೂ ಹೊಸ ವಿಮಾನಗಳ ಸೇರ್ಪಡೆಯಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.

ಏರ್‌ಇಂಡಿಯಾ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಬಂಡವಾಳ ಹಿಂತೆಗೆತಕ್ಕೆ ಸರಕಾರ ಮುಂದಾಗಿರುವುದೇಕೆ ಎಂದು ಕಾಂಗ್ರೆಸ್‌ನ ಮನೀಷ್ ತಿವಾರಿ ಕೇಳಿದ್ದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಈ ಹಿಂದೆ ಹೂಡಿಕೆ ಹಿಂತೆಗೆತಕ್ಕೆ ನಡೆಸಿದ್ದ ಪ್ರಯತ್ನ ವಿಫಲವಾದ ಕಾರಣ ಸರಕಾರ ಪಾಠ ಕಲಿತಿದ್ದು ಈ ಬಾರಿಯ ಕಾರ್ಯವಿಧಾನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡು ರಾಷ್ಟ್ರಗಳ ನಡುವಿನ ಬಿಕ್ಕಟ್ಟಿನ ಸಂದರ್ಭ ಪಾಕಿಸ್ತಾನ ತನ್ನ ವಾಯುಕ್ಷೇತ್ರವನ್ನು ಮುಚ್ಚಿದ್ದರಿಂದ ಏರ್ ಇಂಡಿಯಾ ಸುಮಾರು 430 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಬೇಕಾಗಿದೆ ಎಂದು ಸಚಿವರು ಲೋಕಸಭೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News