‘ಅಗತ್ಯಕ್ಕಿಂತ ಹೆಚ್ಚಿನ’ ವಿದ್ಯಾರ್ಹತೆಗೆ ಉದ್ಯೋಗ ನಿರಾಕರಣೆ

Update: 2019-07-11 16:12 GMT

ಚೆನ್ನೈ,ಜು.11: ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಹಿಳೆ ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾರೆ ಎಂಬ ಕಾರಣದಿಂದ ಆಕೆಗೆ ಉದ್ಯೋಗವನ್ನು ನಿರಾಕರಿಸಿದ್ದ ಚೆನ್ನೈ ಮೆಟ್ರೋ ರೇಲ್ ಲಿ.(ಸಿಎಂಆರ್‌ಎಲ್)ನ ನಿರ್ಧಾರವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿದೆ.

ಟ್ರೇನ್ ಆಪರೇಟರ್, ಸ್ಟೇಷನ್ ಕಂಟ್ರೋಲರ್, ಜ್ಯೂನಿಯರ್ ಇಂಜಿನಿಯರ್(ಸ್ಟೇಷನ್) ಹುದ್ದೆಗಳಿಗಾಗಿ ತನ್ನ ಅರ್ಜಿಯನ್ನು ತಿರಸ್ಕರಿಸಿರುವ ಸಿಎಂಆರ್‌ಎಲ್ ಆದೇಶವನ್ನು ಪ್ರಶ್ನಿಸಿ ಆರ್.ಲಕ್ಷ್ಮಿಪ್ರಭಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಸ್.ವೈದ್ಯನಾಥನ್ ಅವರು ವಜಾಗೊಳಿಸಿದರು.

  ಈ ಹುದ್ದೆಗಳಿಗಾಗಿ ಕನಿಷ್ಠ ವಿದ್ಯಾರ್ಹತೆಯನ್ನು ಡಿಪ್ಲೋಮಾ ಇನ್ ಇಂಜಿನಿಯರಿಂಗ್‌ಗೆ ನಿಗದಿಗೊಳಿಸಲಾಗಿತ್ತು. ಲಕ್ಷ್ಮಿಪ್ರಭಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ.

 ಸಿಎಂಆರ್‌ಎಲ್ ಜಾಹೀರಾತನ್ನು ಪ್ರಸ್ತಾಪಿಸಿದ ನ್ಯಾಯಾಧೀಶರು,ಕನಿಷ್ಠ ಅಗತ್ಯ ವಿದ್ಯಾರ್ಹತೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಮತ್ತು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದೂ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೆಚ್ಚಿನ ವಿದ್ಯಾರ್ಹತೆಗಾಗಿ ಪರಿಹಾರಕ್ಕೆ ಅರ್ಹರಲ್ಲ ಎಂದು ಎತ್ತಿ ಹಿಡಿಯುವುದನ್ನು ಬಿಟ್ಟರೆ ಈ ನ್ಯಾಯಾಲಯಕ್ಕೆ ಬೇರೆ ಆಯ್ಕೆಯಿಲ್ಲ. ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು.

ಸಿಎಂಆರ್‌ಎಲ್‌ನ 2013,ಫೆ.1ರ ಜಾಹೀರಾತಿನಂತೆ ಲಕ್ಷ್ಮಿಪ್ರಭಾ ಅವರು ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ಆ ವರ್ಷದ ಮಾ.31ರಂದು ನಡೆಸಿದ್ದ ಆನ್‌ಲೈನ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News