ದಲಿತ ಯುವಕನ ಹತ್ಯೆ ಪ್ರಕರಣ: ಒಬ್ಬ ಆರೋಪಿಯ ಬಂಧನ

Update: 2019-07-11 15:55 GMT

ಗಾಂಧೀನಗರ, ಜು.11: ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ದಲಿತ ಯುವಕನನ್ನು ಹುಡುಗಿಯ ಬಂಧುಗಳು ಕೊಲೆ ಮಾಡಿರುವ ಪ್ರಕರಣದಲ್ಲಿ 8 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಈ ಮಧ್ಯೆ, ಕಳೆದ ಕೆಲವು ದಿನಗಳಿಂದ ಹುಡುಗಿಯ ಸಂಬಂಧಿಕರಿಂದ ತಮಗೆ ನಿರಂತರ ಜೀವಬೆದರಿಕೆ ಬರುತ್ತಿತ್ತು ಎಂದು ಹತ ದಲಿತ ಯುವಕನ ಕುಟುಂಬದವರು ಹೇಳಿದ್ದಾರೆ.

ಸೋಮವಾರ ಹರೀಶ್ ಸೋಲಂಕಿ ಎಂಬ ದಲಿತ ಯುವಕನನ್ನು ಅಹಮದಾಬಾದ್ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿತ್ತು. ಮೇಲ್ಜಾತಿಯ ಯುವತಿ ಉರ್ಮಿಳಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಹರೀಶ್ ಆಕೆಯೊಂದಿಗೆ ದಿಲ್ಲಿಗೆ ಪಲಾಯನ ಮಾಡಿದ್ದ. ಅಂದಿನಿಂದ ತಮ್ಮ ಕುಟುಂಬಕ್ಕೆ ಉರ್ಮಿಳಾ ತಂದೆ, ಸಹೋದರ ಹಾಗೂ ಮಾವನಿಂದ ನಿರಂತರ ಬೆದರಿಕೆ ಕರೆ ಬರುತ್ತಿತ್ತು ಹಾಗೂ ಉರ್ಮಿಳಾಳನ್ನು ಒಪ್ಪಿಸುವಂತೆ ಸೂಚಿಸಿದ್ದರು ಎಂದು ಹರೀಶ್ ತಂದೆ ಯಶವಂತ್ ಸೋಳಂಕಿ ಹೇಳಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಹರೇಶ್ ಹಾಗೂ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದ ಉರ್ಮಿಳಾ ಮಧ್ಯೆ ಪ್ರೇಮಾಂಕುರವಾಗಿ ಅವರಿಬ್ಬರು ಮದುವೆಯಾಗಿದ್ದರು. ಮದುವೆಯ ಬಳಿಕ ಎರಡು ತಿಂಗಳು ದಿಲ್ಲಿಯಲ್ಲಿ ನೆಲೆಸಿದ್ದು ಬಳಿಕ ಊರಿಗೆ ಬಂದು ಕಛ್ ಜಿಲ್ಲೆಯ ಗಾಂಧಿಧಾಮದಲ್ಲಿರುವ ಸೋಳಂಕಿಯ ಕುಟುಂಬದವರೊಂದಿಗೆ ವಾಸಿಸುತ್ತಿದ್ದರು. ಈ ಮಧ್ಯೆ ಉರ್ಮಿಳಾ ಗರ್ಭಿಣಿಯಾದ ಬಳಿಕ ಅವಳ ತಂದೆ ಹಾಗೂ ಬಂಧುಗಳು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ.

ಕಳೆದ ಸೋಮವಾರ ಹರೀಶ್ ಸೋಳಂಕಿ ತನ್ನ ಪತ್ನಿಯನ್ನು ವಾಪಾಸು ಕರೆತರಲು ರಾಜ್ಯ ಮಹಿಳಾ ಹೆಲ್ಪ್‌ಲೈನ್ ‘ಅಭಯಂ’ನ ನೆರವು ಕೋರಿದ್ದ. ಸೋಮವಾರ ಅಭಯಂ ಕಚೇರಿಯ ಹೊರಗಡೆ ಅಭಯಂನ ನ್ಯಾಯವಾದಿ ಭವಿಕಾ ಭಗೋರಾರೊಂದಿಗೆ ನಿಂತಿದ್ದ ಹರೇಶ್‌ನನ್ನು ಗುಂಪೊಂದು ಕೊಲೆ ಮಾಡಿತ್ತು. ತನ್ನ ಮೇಲೂ ಹಲ್ಲೆ ನಡೆಸಿ, ತನ್ನ ಕಾರಿನ ಮೇಲೆ ದೊಣ್ಣೆಯಿಂದ ಬಡಿದು ತನಗೆ ಬೆದರಿಕೆ ಒಡ್ಡಲಾಗಿದೆ ಎಂದು ಭವಿಕಾ ಆರೋಪಿಸಿದ್ದಾರೆ. ಹತ್ಯೆ ಪ್ರಕರಣದಲ್ಲಿ ಉರ್ಮಿಳಾ ತಂದೆ ದಶರಥಸಿನ್ಹ ಝಾಲ ಪ್ರಮುಖ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

“ಹರೀಶ್ ಮೇಲೆ ದಾಳಿ ನಡೆಸಿ ಕೊಲೆಗೈದ ಸ್ಥಳದಿಂದ ಮಂಡಲ್ ಪೊಲೀಸ್ ಠಾಣೆ ಕೇವಲ 6 ಕಿಮೀ ದೂರವಿದೆ. ಹತ್ಯೆ ನಡೆದಾಗ ಸ್ಥಳದಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್ ತಕ್ಷಣ ಠಾಣೆಗೆ ಕರೆ ಮಾಡಿ ತಿಳಿಸಿದ್ದು 15 ನಿಮಿಷದೊಳಗೆ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅದಾಗಲೇ ಎಲ್ಲಾ 8 ಆರೋಪಿಗಳೂ ತಮ್ಮ ಕುಟುಂಬ ಸದಸ್ಯರೊಂದಿಗೆ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಹೇಗೆ ಸಾಧ್ಯ ?” ಎಂದು ದಲಿತ ಪರ ಹೋರಾಟಗಾರ ಕಿರಿತ್ ರಾಥೋಡ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News