ಗುಂಪು ಹಲ್ಲೆಗಳು: ಜೀವಾವಧಿ ಶಿಕ್ಷೆಗೆ ಉ.ಪ್ರದೇಶ ಕಾನೂನು ಆಯೋಗದ ಒತ್ತು

Update: 2019-07-11 16:02 GMT

ಲಕ್ನೋ, ಜು.11: ಗೋರಕ್ಷಕರಿಂದ ಸೇರಿದಂತೆ ಗುಂಪುಗಳಿಂದ ಹಲ್ಲೆ-ಹತ್ಯೆ ಘಟನೆಗಳನ್ನು ಗಮನಕ್ಕೆ ತೆಗೆದುಕೊಂಡಿರುವ ಉತ್ತರ ಪ್ರದೇಶ ಕಾನೂನು ಆಯೋಗವು ಇಂತಹ ಅಪರಾಧಗಳಿಗಾಗಿ ಕನಿಷ್ಠ ಏಳು ವರ್ಷಗಳಿಂದ ಜೀವಾವಧಿಯವರೆಗೆ ಜೈಲು ಶಿಕ್ಷೆಯನ್ನು ಶಿಫಾರಸು ಮಾಡಿ ಕರಡು ಮಸೂದೆಯನ್ನು ಸರಕಾರಕ್ಕೆ ಸಲ್ಲಿಸಿದೆ.

ಆಯೋಗದ ಅಧ್ಯಕ್ಷ ನಿವೃತ್ತ ನ್ಯಾ.ಎ.ಎನ್.ಮಿತ್ತಲ್ ಅವರು ಬುಧವಾರ ಗುಂಪಿನಿಂದ ಥಳಿಸಿ ಹತ್ಯೆ ಕುರಿತು ವರದಿಯನ್ನು ಕರಡು ಮಸೂದೆಯೊಂದಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ್ದಾರೆ ಎಂದು ಆಯೋಗದ ಕಾರ್ಯದರ್ಶಿ ಸಪ್ನಾ ತ್ರಿಪಾಠಿ ಅವರು ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದರು.

2015ರಲ್ಲಿ ಗೋಮಾಂಸ ಸೇವನೆ ಆರೋಪದಲ್ಲಿ ದಾದ್ರಿಯಲ್ಲಿ ಮುಹಮ್ಮದ್‌ ಅಖ್ಲಾಕ್ ಹತ್ಯೆ ಸೇರಿದಂತೆ ರಾಜ್ಯದಲ್ಲಿಯ ವಿವಿಧ ಗುಂಪು ಥಳಿತ ಮತ್ತು ಹಿಂಸಾಚಾರದ ಘಟನೆಗಳನ್ನು ತನ್ನ 128 ಪುಟಗಳ ವರದಿಯಲ್ಲಿ ಪ್ರಸ್ತಾಪಿಸಿರುವ ಆಯೋಗವು ಸರ್ವೋಚ್ಚ ನ್ಯಾಯಾಲಯವು 2018ರಲ್ಲಿ ಮಾಡಿದ್ದ ಶಿಫಾರಸುಗಳಿಗೆ ಅನುಗುಣವಾಗಿ ತಕ್ಷಣವೇ ಕಾನೂನೊಂದನ್ನು ರೂಪಿಸುವಂತೆ ಸಲಹೆ ನೀಡಿದೆ.

ಗುಂಪಿನಿಂದ ಹತ್ಯೆ-ಹಿಂಸಾಚಾರಗಳನ್ನು ತಡೆಯಲು ಹಾಲಿ ಇರುವ ಕಾನೂನುಗಳು ಸಾಲದು,ಹೀಗಾಗಿ ಇಂತಹ ಘಟನೆಗಳನ್ನು ಹತ್ತಿಕ್ಕಲು ವಿಶೇಷವಾದ ಕಾನೂನಿನ ಅಗತ್ಯವಿದೆ ಎಂದು ಆಯೋಗವು ಒತ್ತಿ ಹೇಳಿದೆ.

ಇಂತಹ ಕಾನೂನನ್ನು ಉತ್ತರ ಪ್ರದೇಶ ಗುಂಪು ಹಿಂಸಾಚಾರ ತಡೆ ಕಾಯ್ದೆ ಎಂದು ಕರೆಯಬಹುದಾಗಿದೆ ಎಂದು ಹೇಳಿರುವ ಆಯೋಗವು, ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಹೊಣೆಗಾರಿಕೆಗಳನ್ನು ನಿಗದಿಗೊಳಿಸಿದೆ ಹಾಗೂ ಕರ್ತವ್ಯಚ್ಯುತಿಗಾಗಿ ದಂಡನೆಗಳನ್ನೂ ಪ್ರಸ್ತಾಪಿಸಿದೆ.

ಗಂಭೀರ ಗಾಯ,ಜೀವ ಅಥವಾ ಆಸ್ತಿಹಾನಿಗಾಗಿ ಬಲಿಪಶುಗಳ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು,ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿಗೆ ಅವಕಾಶವನ್ನು ಕಲ್ಪಿಸಬೇಕು ಎಂದೂ ಆಯೋಗವು ಹೇಳಿದೆ.

ಲಭ್ಯ ಮಾಹಿತಿಗಳಂತೆ 2012-2019ರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಗೋರಕ್ಷಕರಿಂದ ಸೇರಿದಂತೆ ಗುಂಪು ಹಿಂಸಾಚಾರದ 50 ಘಟನೆಗಳು ನಡೆದಿದ್ದು,11 ಜನರು ಸಾವನ್ನಪ್ಪಿದ್ದಾರೆ.

ಮಣಿಪುರವು ಮಾತ್ರ ಗುಂಪು ಹಿಂಸಾಚಾರದ ವಿರುದ್ಧ ಕಾನೂನನ್ನು ಹೊಂದಿದೆ ಮತ್ತು ಮಾಧ್ಯಮ ವರದಿಗಳಂತೆ ಮಧ್ಯಪ್ರದೇಶ ಸರಕಾರವು ಶೀಘ್ರವೇ ಇಂತಹ ಕಾನೂನನ್ನು ತರಲಿದೆ ಎಂದು ವರದಿಯು ತಿಳಿಸಿದೆ.

ಗುಂಪುಗಳು ಈಗ ಪೊಲೀಸರ ವಿರುದ್ಧವೂ ಹಿಂಸಾಚಾರ ನಡೆಸುತ್ತಿರುವುದನ್ನು ವರದಿಯು ಬೆಟ್ಟುಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News