‘ಗ್ರೇಟರ್ ಕಾಶ್ಮೀರ’ದ ಉದ್ಯೋಗಿಗಳಿಗೆ ಕಿರುಕುಳ ನೀಡುವುದನ್ನು ಭಾರತ ನಿಲ್ಲಿಸಬೇಕು: ಸಿಪಿಜೆ

Update: 2019-07-11 16:36 GMT

ಜಮ್ಮುಕಾಶ್ಮೀರ, ಜು. 11: ಜಮ್ಮು ಹಾಗೂ ಕಾಶ್ಮೀರ ರಾಜ್ಯದಲ್ಲಿರುವ ‘ಗ್ರೇಟರ್ ಕಾಶ್ಮೀರ್’ ಉದ್ಯೋಗಿಗಳಿಗೆ ಭಾರತೀಯ ಅಧಿಕಾರಿಗಳು ಕಿರುಕುಳ ನೀಡುವುದನ್ನು ನಿಲ್ಲಿಸಲಿ ಎಂದು ಅಮೆರಿಕ ಮೂಲದ ಸರಕಾರೇತರ ಸಂಸ್ಥೆ ಪತ್ರಕರ್ತರ ಹಿತರಕ್ಷಣಾ ಸಮಿತಿ (ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್) ಆಗ್ರಹಿಸಿದೆ.

ಹೊಸದಿಲ್ಲಿಯಲ್ಲಿ ಈ ದಿನಪತ್ರಿಕೆಯ ಸಂಪಾದಕ ಫಯಾಝ್ ಅಹ್ಮದ್ ಕಲೂ ಅವರನ್ನು ಎನ್‌ಐಎ 6 ದಿನಗಳ ಕಾಲ ಪ್ರಶ್ನಿಸಿರುವುದು ವರದಿಯಾದ ಬಳಿಕ ಈ ಹೇಳಿಕೆ ಹೊರಬಿದ್ದಿದೆ.

ಪ್ರಕಟಿತ ವರದಿಯ ಬಗ್ಗೆ ಸಂಪಾದಕರನ್ನು ವಿಸ್ತೃತವಾಗಿ ಪ್ರಶ್ನಿಸುವ ಮೂಲಕ ತನಿಖಾ ಸಂಸ್ಥೆಯ ನ್ಯಾಯಬದ್ಧ ಅಧಿಕಾರವನ್ನು ಮೀರಿದೆ. ಇದು ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯಕ್ಕೆ ಮತ್ತೊಂದು ಹೊಡೆತ ನೀಡಿದೆ ಎಂದು ಸಿಪಿಜೆ ಏಶ್ಯಾ ಕಾರ್ಯಕ್ರಮದ ಸಂಯೋಜಕ ಸ್ಟೀವನ್ ಬಟ್ಲರ್ ಹೇಳಿದ್ದಾರೆ.

ಐಎನ್‌ಎ ಫಯಾಝ್ ಕಲೂ ಹಾಗೂ ಗ್ರೇಟರ್ ಕಾಶ್ಮೀರದ ಕುರಿತ ತನಿಖೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

2016ರ ಜುಲೈಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರ ಬುರ್ಹಾನ್ ವಾನಿ ಹತನಾದ ಹಿನ್ನೆಲೆಯಲ್ಲಿ ಸಂಭವಿಸಿದ ಹಿಂಸಾಚಾರದ ಸಂದರ್ಭ ದಿನಪತ್ರಿಕೆಯಲ್ಲಿ ಪ್ರಕಟವಾದ ಹಲವು ಲೇಖನಗಳ ಕುರಿತು ಕಲೂ ಅವರನ್ನು ಪ್ರಶ್ನಿಸಲಾಗಿದೆ ಎಂದು ಕೆಲವು ವರದಿಗಳು ಹೇಳಿವೆ.

ಐಎನ್‌ಎ ಆರಂಭದಲ್ಲಿ ಕಲೂಗೆ ಜೂನ್ 28ರಂದು ಸಮನ್ಸ್ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅನಂತರ ಅವರನ್ನು ಜುಲೈ 1ರಂದು ವಿಚಾರಣೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News