36 ವರ್ಷಗಳ ಹಿಂದೆ ನಾಪತ್ತೆಯಾದ ತರುಣಿಗಾಗಿ ಶೋಧ

Update: 2019-07-11 17:29 GMT

ವ್ಯಾಟಿಕನ್, ಜು. 11: 36 ವರ್ಷಗಳ ಹಿಂದೆ ನಾಪತ್ತೆಯಾದ ಇಟಲಿಯ ಓರ್ವ ತರುಣಿಯ ಶೋಧ ಕಾರ್ಯವನ್ನು ಕೈಗೆತ್ತಿಕೊಂಡಿರುವ ವ್ಯಾಟಿಕನ್, ಗುರುವಾರ ಎರಡು ಸಮಾಧಿಗಳನ್ನು ಅಗೆಯಲು ಆರಂಭಿಸಿದೆ.

ಆ ಎರಡು ಗೋರಿಗಳಲ್ಲಿ ಆ ತರುಣಿಯ ಅವಶೇಷಗಳು ಇರಬಹುದು ಎಂಬುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ನೀಡಿದ ಸುಳಿವಿನ ಮೇರೆಗೆ ಅಗೆತ ಕಾರ್ಯವನ್ನು ನಡೆಸಲಾಗುತ್ತಿದೆ.

ವ್ಯಾಟಿಕನ್ ಉದ್ಯೋಗಿಯೊಬ್ಬರ 15 ವರ್ಷದ ಮಗಳು ಇಮಾನುಯೆಲಾ ಒರ್ಲಾಂಡಿ ನಾಪತ್ತೆಯಾಗಿರುವವರು. ಅವರು ಸಂಗೀತ ತರಗತಿಯೊಂದರಿಂದ ಹೊರಬರುತ್ತಿರುವುದನ್ನು ಜನರು ಕೊನೆಯದಾಗಿ ನೋಡಿದ್ದಾರೆ. ಅವರನ್ನು ಯಾರು ಕರೆದುಕೊಂಡು ಹೋಗಿದ್ದಾರೆ ಹಾಗೂ ಅವರ ಮೃತದೇಹ ಎಲ್ಲಿರಬಹುದು ಎಂಬ ಬಗ್ಗೆ ದಶಕಗಳಿಂದ ವಿವಿಧ ಊಹಾಪೋಹಗಳು ಕೇಳಿಬರುತ್ತಿವೆ.

ಒರ್ಲಾಂಡಿಯ ಸಹೋದರ ಪೀಟ್ರೊ ಮಾತ್ರ, ಸಹೋದರಿಯನ್ನು ಜೀವಂತವಾಗಿ ಕಾಣುವ ಆಶೆಯನ್ನು ಕೈಬಿಟ್ಟಿಲ್ಲ.

ವ್ಯಾಟಿಕನ್‌ನ ಸ್ಮಶಾನದಲ್ಲಿರುವ, ತುದಿಯಲ್ಲಿ ದೇವತೆಯ ಚಿತ್ರವನ್ನು ಹೊಂದಿರುವ ಸಮಾಧಿಯ ಚಿತ್ರ ಹಾಗೂ ‘ದೇವತೆಯು ಎಲ್ಲಿಗೆ ಕೈತೋರಿಸುತ್ತದೆಯೋ ಅಲ್ಲಿ ನೋಡಿ’ ಎಂಬ ಸಂದೇಶವೊಂದನ್ನು ಕುಟುಂಬದ ವಕೀಲರು ಪಡೆದ ಬಳಿಕ ಸಮಾಧಿ ಅಗೆತವನ್ನು ನಡೆಸಲಾಗಿದೆ.

ಸಾಲ ವಸೂಲಾತಿಗಾಗಿ ವ್ಯಾಟಿಕನ್ ಮೇಲೆ ಒತ್ತಡ ಹೇರುವುದಕ್ಕಾಗಿ ಗ್ಯಾಂಗ್‌ಸ್ಟರ್‌ಗಳು ಬಾಲಕಿಯನ್ನು ಅಪಹರಿಸಿರಬಹುದು ಅಥವಾ 1981ರಲ್ಲಿ ಪೋಪ್ ದ್ವಿತೀಯ ಜಾನ್ ಪಾಲ್‌ರನ್ನು ಹತ್ಯೆಗೈಯಲು ಪ್ರಯತ್ನಿಸಿದ ಟರ್ಕಿಯ ಮುಹಮ್ಮದ್ ಅಲಿ ಅಜ್ಕನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಡ ಹೇರುವುದಕ್ಕಾಗಿ ಆಕೆಯನ್ನು ಅಪಹರಿಸಿರಬಹುದು ಎಂಬ ಊಹಾಪೋಹಗಳು ದಶಕಗಳ ಕಾಲ ಹರಿದಾಡಿರುವುದನ್ನು ಸ್ಮರಿಸಬಹುದಾಗಿದೆ.

ಎರಡು ಸಮಾಧಿಗಳೂ ಖಾಲಿ!

ಮೂವತ್ತಾರು ವರ್ಷಗಳ ಹಿಂದೆ ನಾಪತ್ತೆಯಾದ 15 ವರ್ಷದ ಇಮಾನುಯೆಲಾ ಒರ್ಲಾಂಡಿಯ ಅವಶೇಷಗಳು ಇರಬಹುದು ಎಂಬುದಾಗಿ ಭಾವಿಸಲಾಗಿದ್ದ ವ್ಯಾಟಿಕನ್‌ನ ಎರಡು ಸಮಾಧಿಗಳು ಖಾಲಿಯಾಗಿರುವುದು ಪತ್ತೆಯಾಗಿದೆ.

ಇದರೊಂದಿಗೆ ಈ ನಿಗೂಢ ನಾಪತ್ತೆಯ ಸುತ್ತ ಆವರಿಸಿರುವ ನಿಗೂಢತೆ ಮತ್ತಷ್ಟು ಆಳವಾಗಿದೆ.

ಈ ಎರಡು ಸಮಾಧಿಗಳು ಇಬ್ಬರು ರಾಜಕುಮಾರರದ್ದೆಂದು ನಂಬಲಾಗಿತ್ತು. ಆದರೆ, ಸಮಾಧಿಗಳಲ್ಲಿ ಇಮಾನುಯೆಲಾ ಒರ್ಲಾಂಡಿಯ ಮೃತದೇಹ ಕಂಡುಬಂದಿಲ್ಲ ಮಾತ್ರವಲ್ಲ, ಅವುಗಳಲ್ಲಿ ರಾಜಕುಮಾರರ ಅಸ್ಥಿಪಂಜರಗಳೂ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News