ಪುತ್ರಿಗೆ ಆಯ್ಕೆಯ ಸ್ವಾತಂತ್ರ್ಯ ಇದೆ: ಬಿಜೆಪಿ ಶಾಸಕ

Update: 2019-07-11 17:39 GMT

 ಹೊಸದಿಲ್ಲಿ, ಜು. 11: ಕುಟುಂಬದ ನಿಲುವಿಗೆ ವಿರುದ್ಧವಾಗಿ ದಲಿತ ವ್ಯಕ್ತಿಯನ್ನು ವಿವಾಹವಾದ ಬಳಿಕ ತನಗೆ ಬೆದರಿಕೆ ಒಡ್ಡಲಾಗಿದೆ ಎಂಬ ಮಹಿಳೆಯೋರ್ವರ ಆರೋಪವನ್ನು ಆಕೆಯ ತಂದೆ, ಬಿಜೆಪಿ ಶಾಸಕ ರಾಜೇಶ್ ಕುಮಾರ್ ಮಿಶ್ರಾ ನಿರಾಕರಿಸಿದ್ದಾರೆ.

‘‘ನನ್ನ ಪುತ್ರಿ ಪ್ರಾಯ ಪ್ರಬುದ್ಧೆ. ಆಕೆಗೆ ಆಯ್ಕೆ ಸ್ವಾತಂತ್ರ್ಯ ಇದೆ.’’ ಎಂದು ಅವರು ಹೇಳಿದ್ದಾರೆ. ಅವರು ಬರೇಲಿ ಬೈಥರಿ ಚೈನ್‌ಪುರ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

 ರಾಜೇಶ್ ಕುಮಾರ್ ಮಿಶ್ರಾ ಅವರ 23ರ ಹರೆಯದ ಪುತ್ರಿ ಸಾಕ್ಷಿ ಮಿಶ್ರಾ ಬುಧವಾರ ಸಾಮಾಜಿಕ ಜಾಲ, ತಾಣದಲ್ಲಿ ಕಾಣಿಸಿಕೊಂಡು ತನಗೆ ಹಾಗೂ ತನ್ನ ಪತಿಗೆ ತಂದೆಯ ಕಡೆಯ ಗೂಂಡಾಗಳು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದರು.

ದಂಪತಿ ಜುಲೈ 4ರಂದು ವಿವಾಹವಾಗಿದ್ದರು.

ತನ್ನ ಬಗ್ಗೆ ಮಾಧ್ಯಮ ಹೇಳುತ್ತಿರುವುದು ಸುಳ್ಳು ಎಂದು ಮಿಶ್ರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘‘ನಾನಾಗಲಿ, ನನ್ನ ಕಡೆಯ ವ್ಯಕ್ತಿಗಳಾಗಲಿ ಅಥವಾ ನನ್ನ ಕುಟುಂಬದವರಾಗಲಿ ಅವರಿಗೆ ಬೆದರಿಕೆ ಒಡ್ಡಿಲ್ಲ. ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ ಹಾಗೂ ಬಿಜೆಪಿಯ ಸದಸ್ಯತ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನನ್ನಿಂದ ಯಾರಿಗೂ ಅಪಾಯ ಆಗಿಲ್ಲ’’ ಎಂದು ಅವರು ಹೇಳಿದ್ದಾರೆ.

ಈ ನಡುವೆ ಬರೇಲಿಯ ಹಿರಿಯ ಪೊಲೀಸ್ ಅಧೀಕ್ಷಕ ಮುನಿರಾಜ್ ಜಿ., ‘‘ಸಾಮಾಜಿಕ ಜಾಲತಾಣದಲ್ಲಿ ದಂಪತಿ ಪೋಸ್ಟ್ ಮಾಡಿದ ವೀಡಿಯೊವನ್ನು ನಾವು ನೋಡಿದ್ದೇವೆ. ಅವರು ಭದ್ರತೆ ಕೋರಿ ಪತ್ರ ಬರೆದರೆ, ಅನಂತರ ನಾವು ಭದ್ರತೆ ನೀಡಲಿದ್ದೇವೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News