ಕೃಷಿ ಬಿಕ್ಕಟ್ಟು ಪರಿಹರಿಸಿ: ರಾಹುಲ್ ಗಾಂಧಿ

Update: 2019-07-11 18:08 GMT

 ಹೊಸದಿಲ್ಲಿ, ಜು. 11: ಲೋಕಸಭೆಯಲ್ಲಿ ಗುರುವಾರ ರೈತರ ಆತ್ಮಹತ್ಯೆ ಸಹಿತ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.

ಸಾಲ ಮರು ಪಾವತಿಸದ ರೈತರಿಗೆ ಬ್ಯಾಂಕ್ ನೋಟಿಸು ಜಾರಿ ಮಾಡಿರುವುದು ಕೃಷಿ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರದ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

ದೇಶದಲ್ಲಿ ರೈತರ ಪರಿಸ್ಥಿತಿ ಘೋರವಾಗಿದೆ ಎಂದು ರಾಹುಲ್ ಗಾಂಧಿ ಶೂನ್ಯ ವೇಳೆಯಲ್ಲಿ ತಿಳಿಸಿದರು. ‘‘ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ’’ ಎಂದು ರಾಹುಲ್ ಗಾಂಧಿ ಹೇಳಿದರು.

 ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈತರ ಆತ್ಮಹತ್ಯೆಗಳಿಗೆ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕಿಂತ ಹಿಂದೆ ಇದ್ದ ಸರಕಾರದ ನೀತಿಗಳು ಕಾರಣ ಎಂದರು.

 ಕನಿಷ್ಠ ಬೆಂಬಲ ಬೆಲೆಯನ್ನು ಸರಕಾರ ಹೆಚ್ಚಿಸಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನುಷ್ಠಾನಗೊಳಿಸಿದೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಕೃಷಿ ಆದಾಯ ಶೇ. 20ರಿಂದ ಶೇ. 25ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News