ವೇಗ ಪಡೆದ ಮುಂಗಾರು: ಬಿತ್ತನೆ ಕಾರ್ಯ ಚುರುಕು

Update: 2019-07-12 03:33 GMT

ಹೊಸದಿಲ್ಲಿ: ಜೂನ್ ತಿಂಗಳಲ್ಲಿ ಕುಂಠಿತಗೊಂಡಿದ್ದ ಮುಂಗಾರು ಜುಲೈ ಆರಂಭದಿಂದಲೇ ವೇಗ ಪಡೆದಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ದೇಶಾದ್ಯಂತ ಜುಲೈ ತಿಂಗಳ ಮೊದಲ 11 ದಿನಗಳಲ್ಲಿ ವಾಡಿಕೆಗಿಂತ ಶೇಕಡ 24ರಷ್ಟು ಅಧಿಕ ಮಳೆಯಾಗಿದ್ದು, ಮಳೆಕೊರತೆ ಪ್ರಮಾಣ ಶೇಕಡ 12ಕ್ಕೆ ಇಳಿದಿದೆ. ಜೂನ್ ಕೊನೆಯ ವೇಳೆಗೆ ದೇಶದಲ್ಲಿ ಶೇಕಡ 33ರಷ್ಟು ಮಳೆಯ ಕೊರತೆ ಇತ್ತು.

ಉತ್ತಮ ಮುಂಗಾರು ಮಳೆಯಿಂದಾಗಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ದಕ್ಷಿಣ ರಾಜ್ಯಗಳನ್ನು ಹೊರತುಪಡಿಸಿ ದೇಶದ ಎಲ್ಲ ಪ್ರದೇಶಗಳಲ್ಲಿ 11 ದಿನಗಳ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕೇಂದ್ರ ಭಾರತ ಈ ಪೈಕಿ ಸಿಂಹಪಾಲು ಪಡೆದಿದೆ.

ಹಿಂದಿನ ವಾರದವರೆಗೆ ಮುಂಗಾರು ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಶೇಕಡ 27ರಷ್ಟು ಕಡಿಮೆ ಇತ್ತು. ಜೂನ್ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗದೇ ಇದ್ದುದು ಇದಕ್ಕೆ ಕಾರಣ. ಶುಕ್ರವಾರ ಅಂಕಿ ಅಂಶ ಪರಿಷ್ಕೃತಗೊಳ್ಳುವ ವೇಳೆಗೆ ಈ ಅಂತರ ಕುಗ್ಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.

ಹವಾಮಾನ ಇಲಾಖೆಯ ಅಂದಾಜಿನಂತೆ ಜುಲೈ 14ರ ಬಳಿಕ ಮುಂಗಾರು ವೇಗ ಕಳೆದುಕೊಳ್ಳಲಿದೆ. ಆದರೆ ದೇಶದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಜುಲೈ 14ರ ಬಳಿಕ ಉತ್ತರ ಹಾಗೂ ಕೇಂದ್ರ ಭಾರತದಲ್ಲಿ ಮಳೆ ಕಡಿಮೆಯಾಗುವ ನಿರೀಕ್ಷೆ ಇದ್ದರೂ, ದಕ್ಷಿಣ ಭಾರತದಲ್ಲಿ ಚೆನ್ನಾಗಿ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಮುಖ್ಯ ಮುಂಗಾರು ಮುನ್ಸೂಚಕ ಡಿ. ಶಿವಾನಂದ ಪೈ ಹೇಳಿದ್ದಾರೆ.

ಆದರೆ ಮುಂಗಾರು ಮಾರುತ ದುರ್ಬಲವಾಗಿ ಮುಂದುವರಿಯುವ ಸಾಧ್ಯತೆ ಕಡಿಮೆ. ಏಕೆಂದರೆ ಜು. 17-18ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಸಾಧ್ಯತೆ ಇದೆ. ಅದು ಸಾಧ್ಯವಾದರೆ ಉತ್ತರ ಹಾಗೂ ಕೇಂದ್ರ ಭಾರತಕ್ಕೆ ಮತ್ತೆ ಉತ್ತಮ ಮಳೆಯಾಗಲಿದೆ ಎನ್ನುವುದು ಅವರ ವಿಶ್ಲೇಷಣೆ.

ಜೂನ್ ತಿಂಗಳಿಗೆ ತದ್ವಿರುದ್ಧವಾಗಿ ಜುಲೈನಲ್ಲಿ ವ್ಯಾಪಕ ಮಳೆಯಾಗಿದ್ದು, ಕೇಂದ್ರ ಭಾರತ ಶೇಕಡ 42ರಷ್ಟು ಅಧಿಕ ಮಳೆ ಪಡೆದಿದೆ. ಪೂರ್ವ ಹಾಗೂ ವಾಯವ್ಯ ಭಾರತದಲ್ಲಿ ಶೇಕಡ 26, ಈಶಾನ್ಯದಲ್ಲಿ ಶೇಕಡ 23ರಷ್ಟು ಅಧಿಕ ಮಳೆ ಬಿದ್ದಿದೆ. ಆದರೆ ಪಂಜಾಬ್, ಹರ್ಯಾಣ ಹಾಗೂ ದೆಹಲಿ, ದಕ್ಷಿಣ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರದ ಮರಾಠವಾಡ ಭಾಗದಲ್ಲಿ ಸಾಕಷ್ಟು ಮಳೆ ಬಿದ್ದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News