ಗುಂಪು ಥಳಿತ ನಿಯಂತ್ರಣಕ್ಕೆ ಕಠಿಣ ಕರಡು ಮಸೂದೆ ಸಿದ್ಧ ಪಡಿಸಿದ ಉತ್ತರ ಪ್ರದೇಶ

Update: 2019-07-12 05:26 GMT
ಫೋಟೊ: ದಿ ಇಂಡಿಯನ್ ಎಕ್ಸ್ ಪ್ರೆಸ್

ಲಕ್ನೋ : ಹೆಚ್ಚುತ್ತಿರುವ ಗುಂಪು ಥಳಿತ  ಪ್ರಕರಣಗಳನ್ನು ಹತ್ತಿಕ್ಕಲು ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ ಕಠಿಣ ಕಾನೂನನ್ನು ರಚಿಸಿದೆ ಹಾಗೂ ಗುಂಪು ಥಳಿತ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಏಳು ವರ್ಷಗಳ ತನಕದ ಸಜೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ಇಂತಹ ಪ್ರಕರಣಗಳಲ್ಲಿ ಕರ್ತವ್ಯ ಲೋಪವುಂಟಾದರೆ ಅವರಿಗೆ ಮೂರು ವರ್ಷಗಳ ತನಕದ ಸಜೆಯನ್ನು ಶಿಫಾರಸು ಮಾಡಿದೆ.

ಉತ್ತರ ಪ್ರದೇಶ ಗುಂಪು ಥಳಿತ ನಿಗ್ರಹ ಮಸೂದೆ 2019 ಇದರ ಕರಡನ್ನು ಹೊಂದಿರುವ ವರದಿಯನ್ನು ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಆಯೋಗದ ಅಧ್ಯಕ್ಷ ನಿವೃತ್ತ ಜಸ್ಟಿಸ್ ಆದಿತ್ಯನಾಥ್ ಮಿತ್ತಲ್ ಅವರು ಸಲ್ಲಿಸಿದ್ದಾರೆ.

ಗುಂಪು ಥಳಿತ  ಪ್ರಕರಣಗಳನ್ನು  ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿರುವ ಆಯೋಗ ಈಗ ಅಸಿತ್ವದಲ್ಲಿರುವ ಕಾನೂನು ಸಾಕಾಗದು, ತಪ್ಪು ಮಾಡಿದವರನ್ನು ಶಿಕ್ಷಿಸುವ ಜತೆಗೆ ಇಂತಹ ಘಟನೆಗಳು ತಮ್ಮೆದುರೇ ನಡೆದಾಗ ಕರ್ತವ್ಯ ಲೋಪವೆಸಗುವ ಅಧಿಕಾರಿಗಳನ್ನೂ ಹೊಣೆಯಾಗಿಸಬೇಕೆಂದು ಅಭಿಪ್ರಾಯ ಪಟ್ಟಿದೆ.

ದುಷ್ಕರ್ಮಿಗಳಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಗುಂಪು ಥಳಿತವನ್ನು ಒಂದು ಪ್ರತ್ಯೇಕ ಅಪರಾಧವೆಂದು ಪರಿಗಣಿಸಬೇಕೆಂದು ಹೇಳಿರುವ ಆಯೋಗ ಸಿದ್ಧಪಡಿಸಿರುವ ಕರಡು ಕಾನೂನು ಕಠಿಣ ಶಿಕ್ಷೆ ಶಿಫಾರಸು ಮಾಡಿದೆ.

►ಸಂತ್ರಸ್ತನಿಗೆ ಗಾಯಗಳುಂಟಾಗಿದ್ದರೆ ಘಟನೆಗೆ ಕಾರಣರಾದವರಿಗೆ ಏಳು ವರ್ಷಗಳ ತನಕ ಸಜೆ ಹಾಗೂ 1 ಲಕ್ಷ ರೂ. ತನಕ ದಂಡ

► ಸಂತ್ರಸ್ತನಿಗೆ ಗಂಭೀರ ಗಾಯಗಳಾಗಿದ್ದರೆ ತಪ್ಪಿತಸ್ಥರಿಗೆ 10 ವರ್ಷಗಳ ತನಕ ಸಜೆ ಹಾಗೂ 3 ಲಕ್ಷ ರೂ. ತನಕ ದಂಡ.

►ಸಂತ್ರಸ್ತ ಮೃತಪಟ್ಟರೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ.

► ಸಂಚು ಹೂಡಿದವರು ಹಾಗೂ  ಇಂತಹ ಘಟನೆಗಳಿಗೆ ಸಹಾಯ ಮಾಡಿದವರಿಗೂ ಗುಂಪು ಥಳಿತ ಘಟನೆಗಳಲ್ಲಿ ಶಾಮೀಲಾದವರಿಗೆ ನೀಡಿದಂತಹುದೇ ಶಿಕ್ಷೆ ವಿಧಿಸಬೇಕು.

► ಪೊಲೀಸ್ ಅಧಿಕಾರಿ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಕರ್ತವ್ಯಲೋಪ ಉಂಟಾಗಿದ್ದರೆ ಮೂರು ವರ್ಷದ ತನಕ ವಿಸ್ತರಿಸಬಹುದಾದಂತಹ ಒಂದು ವರ್ಷ ಜೈಲು ಶಿಕ್ಷೆ ಹಾಗೂ  5,000 ರೂ. ದಂಡ.

►ದ್ವೇಷದ ವಾತಾವರಣಕ್ಕೆ ಕಾರಣರಾದವರಿಗೆ ಆರು ತಿಂಗಳ ತನಕ ಜೈಲು ಶಿಕ್ಷೆ.

ಈ ಕರಡು ಮಸೂದೆಯು ಸಂತ್ರಸ್ತ ಅಥವಾ ಆತನ ಕುಟುಂಬಕ್ಕೆ ಮುಂದೆ ಎದುರಿಸಬಹುದಾದ ದ್ವೇಷದ ವಾತಾವರಣ, ನಿಂದನೆ, ಮೂಲಭೂತ ಹಕ್ಕುಗಳಿಂದ ವಂಚನೆ ಹಾಗೂ ಭಯದಿಂದ ವಲಸೆ ಹೋಗುವುದು ಇವೇ  ಮುಂತಾದ ಸಮಸ್ಯೆಗಳನ್ನೂ ಉಲ್ಲೇಖಿಸಿ ಈ ರೀತಿಯ ಸಮಸ್ಯೆ ಸೃಷ್ಟಿಸುವವರಿಗೂ ಶಿಕ್ಷೆ ಶಿಫಾರಸು ಮಾಡಿದೆ.

ಕಾನೂನು ಆಯೋಗ ರಾಜ್ಯ ಸರಕಾರಕ್ಕೆ ಕೇವಲ ಶಿಫಾರಸು ಮಾಡಬಹುದಾಗಿದ್ದು, ಅದನ್ನು ಒಪ್ಪಿ  ಜಾರಿಗೆ ತರುವ ನಿರ್ಧಾರ ರಾಜ್ಯ ಸರಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದ ಆಯೋಗದ ಕಾರ್ಯದರ್ಶಿ ಸಪ್ನಾ ತ್ರಿಪಾಠಿ ಆಯೋಗ ಮುಂದೆ ವಿವಾಹದ ಉದ್ದೇಶಕ್ಕೆ ಮತಾಂತರ ಕುರಿತಂತೆ ಮತಾಂತರ ವಿರೋಧಿ ಕಾನೂನಿನ ವಿಚಾರದಲ್ಲಿ ಅಧ್ಯಯನ ನಡೆಸಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News