ಬೈರಂಪಳ್ಳಿ: ಬಸ್ ನಿರ್ವಾಹಕನ ಕತ್ತಿಯಿಂದ ಕಡಿದು ಕೊಲೆ

Update: 2019-07-12 16:17 GMT

ಹಿರಿಯಡ್ಕ, ಜು.12: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಬಸ್ ನಿರ್ವಾಹಕರೊಬ್ಬರನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪೆರ್ಡೂರು ಸಮೀಪದ ಬೈರಂಪಳ್ಳಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಜು.11ರಂದು ಮಧ್ಯರಾತ್ರಿ ವೇಳೆ ನಡೆದಿದೆ.

ಮೃತರನ್ನು ದೂಪದಕಟ್ಟೆಯ ಹುಣ್ಸೆಬಾಕೇರ್ ನಿವಾಸಿ ಪ್ರಶಾಂತ್ ಪೂಜಾರಿ (37) ಎಂದು ಗುರುತಿಸಲಾಗಿದೆ.

ಇವರು ಕಳೆದ ಒಂದು ವರ್ಷದಿಂದ ಮಲ್ಪೆ ಮಾರ್ಗದ ಬಸ್‌ನಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದರು. ಜು.11ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಇವರು ಊಟ ಮಾಡಿ ಮಲಗಿದ್ದರು. ರಾತ್ರಿ 12 ಗಂಟೆಗೆ ಸುಮಾರಿಗೆ ಮನೆಯ ಬಾಗಿಲು ಬಡಿದ ಸುಮಾರು 25ರಿಂದ 30 ವರ್ಷ ಪ್ರಾಯದ ಇಬ್ಬರು ಯುವಕರು, ಪ್ರಶಾಂತ್ ಪೂಜಾರಿಯನ್ನು ಮನೆಯ ಹೊರಗಡೆ ಕರೆದುಕೊಂಡು ಹೋದರೆನ್ನಲಾಗಿದೆ.

ಹೊರಗಡೆ ಇವರ ಮಧ್ಯೆ ಜಗಳ ನಡೆದಿದ್ದು, ಸ್ವಲ್ಪಸಮಯದ ನಂತರ ಇಬ್ಬರು ಯುವಕರ ಪೈಕಿ ಓರ್ವ ನೇರ ಮನೆಯೊಳಗೆ ನುಗ್ಗಿದ ಎನ್ನಲಾಗಿದೆ. ಆಗ ಪ್ರಶಾಂತ್ ಪೂಜಾರಿಯ ಪತ್ನಿ ವಿಜಯ(28) ತನ್ನ ರಕ್ಷಣೆಗಾಗಿ ಮನೆ ಯಲ್ಲಿದ್ದ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡರು. ಆದರೆ ಆತ ವಿಜಯ ಕೈಯಲ್ಲಿದ್ದ ಎಳೆದುಕೊಂಡಿದ್ದು, ಇದರಿಂದ ಅವರ ಕೈ ಬೆರಳಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಕತ್ತಿಯನ್ನು ಎಳೆದುಕೊಂಡು ಹೊರಗಡೆ ಹೋದ ದುಷ್ಕರ್ಮಿ, ಹೊರಗಿನಿಂದ ಮನೆಯ ಬಾಗಿಲಿನ ಚಿಲಕವನ್ನು ಹಾಕಿದನು. ನಂತರ ಯುವಕರಿಬ್ಬರು ಸೇರಿ ಪ್ರಶಾಂತ್ ಪೂಜಾರಿಯನ್ನು ಮನೆ ಸಮೀಪದ ತೋಟದಲ್ಲಿ ಕತ್ತಿಯಿಂದ ಕಡಿದು ಕೊಲೆ ಮಾಡಿ ಪರಾರಿಯಾದರು ಎಂದು ಹೇಳಲಾಗಿದೆ.

ಈ ವೇಳೆ ಮನೆಯೊಳಗಿದ್ದ ವಿಜಯ ನೆರೆಮನೆಯ ಉಮೇಶ ಭಂಡಾರಿ ಎಂಬವರಿಗೆ ಕರೆ ಮಾಡಿ ತಿಳಿಸಿದ್ದು, ಅವರು ಸ್ವಲ್ಪಸಮಯದಲ್ಲಿ ಸ್ಥಳಕ್ಕೆ ಬಂದು ಚಿಲಕ ತೆಗೆದರೆನ್ನಲಾಗಿದೆ. ಆದರೆ ತೋಟಕ್ಕೆ ಹೋಗಲು ಭಯ ಪಟ್ಟ ಹಿನ್ನೆಲೆ ಯಲ್ಲಿ ವಿಜಯ ತನ್ನ ಸಹೋದರ ಸಂತೋಷ್‌ರಿಗೆ ಕರೆ ಮಾಡಿ ತಿಳಿದರೆನ್ನಲಾಗಿದೆ. ಸುಮಾರು ನಸುಕಿನ ವೇಳೆ 1:15 ಗಂಟೆಗೆ ಸಂತೋಷ್ ಹಾಗೂ ಇತರರು ಬಂದು ನೋಡಿದಾಗ ಪ್ರಶಾಂತ್ ಪೂಜಾರಿ ತೋಟದ ತೆಂಗಿನ ಮರದ ಅಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಪ್ರಶಾಂತ್ ಪೂಜಾರಿಯ ಮುಖಕ್ಕೆ ಮೈ ಕೈಗೆ ಕತ್ತಿಯಿಂದ ಕಡಿದ ಆಳವಾದ ಗಾಯಗಳಾಗಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.ಈ ಬಗ್ಗೆ ಪತ್ನಿ ವಿಜಯ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಸ್ಥಳದಲ್ಲಿ ಟವೆಲ್, ಬೈಕ್ ಪತ್ತೆ

ಕೊಲೆಗೈದ ದುಷ್ಕರ್ಮಿಗಳು ಧರಿಸಿದ್ದ ಟವೆಲ್ ಅಂಗಳದಿಂದ ತೋಟಕ್ಕೆ ಹೋಗುವ ಮೆಟ್ಟಿಲಿನಲ್ಲಿ ಬಿದ್ದಿದ್ದು, ಮನೆಯ ಎದುರಿನ ರಸ್ತೆಯಲ್ಲಿ ಒಂದು ಕೆಎ-20-ಇಇ-4914 ನಂಬರಿನ ಬೈಕ್ ಮಗ್ಗುಲಾಗಿ ಬಿದ್ದು ಪತ್ತೆಯಾಗಿದೆ.

ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕೊಲೆಗೈದ ಬಳಿಕ ಸ್ಥಳೀಯರು ಒಟ್ಟಾಗುತ್ತಿದ್ದ ಭಯದಲ್ಲಿ ಸ್ಟಾಂಡ್ ಇಲ್ಲದೆ ಬಿದ್ದಿದ್ದ ಬೈಕನ್ನು ಎತ್ತಲು ಸಾಧ್ಯವಾಗದೆ ಅಲ್ಲೇ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆನ್ನಲಾಗಿದೆ. ಇದೀಗ ಪೊಲೀಸರು ಬೈಕನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ಮಾಹಿತಿ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಹಲವರನ್ನು ವಿಚಾರೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳಿಂದ ಸಾಲ ಪಡೆದುಕೊಂಡಿದ್ದು, ಇದನ್ನು ತೀರಿಸಿದ ವಿಚಾರದಲ್ಲಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News