ತನ್ನನ್ನು ಜೀತದಿಂದ ರಕ್ಷಿಸಿದ ಅಧಿಕಾರಿಗಳ ಕಾಲಿಗೆ ಬಿದ್ದ 70 ವರ್ಷದ ವೃದ್ಧ: ಮನಕಲಕುವ ಫೋಟೊ

Update: 2019-07-13 15:41 GMT
Photo: indianexpress.com/Jerusha Venkatarangam

ಕಾಂಚೀಪುರಂ, ಜು.12: ಮರದ ಕಾರ್ಖಾನೆಯೊಂದರಲ್ಲಿ ಕಳೆದ ಕೆಲವು ವರ್ಷಗಳಿಂದ ಜೀತದಾಳಾಗಿ ದುಡಿಯುತ್ತಿದ್ದ 70 ವರ್ಷದ ಕಾಶಿ ಸಹಿತ ಕನಿಷ್ಠ ಎರಡು ಡಝನ್ ಜನರನ್ನು ಕಂದಾಯ ಅಧಿಕಾರಿಗಳು ಬುಧವಾರ ಜೀತಮುಕ್ತಗೊಳಿಸಿದ್ದಾರೆ. ಆದರೆ ಇದಾಗಿ ಕೆಲವೇ ಗಂಟೆಗಳ ನಂತರ ಕೇವಲ 20,000 ರೂ. ಸಾಲ ಮರುಪಾವತಿಗಾಗಿ ತನ್ನನ್ನು ದುಡಿಸುತ್ತಿದ್ದ ಮಾಜಿ ಮಾಲಕನ ಕಡೆಯವರು ತನಗೆ ಬೆದರಿಕೆಯೊಡ್ಡಿದ್ದಾರೆ ಎಂದು ಕಾಶಿ ಹೇಳಿಕೊಂಡಿದ್ದಾನೆ.

“ನಮ್ಮನ್ನು ಅಧಿಕಾರಿಗಳು ಬೆಳಗ್ಗೆ ಜೀತಮುಕ್ತಿಗೊಳಿಸಿ ತಡರಾತ್ರಿ ಮನೆಗೆ ತಲುಪಿಸಿದರು. ನಮಗೆ 10 ಕೆಜಿ ಅಕ್ಕಿ, ಧೋತಿ ಮತ್ತು ಸೀರೆಯನ್ನೂ ನೀಡಿದ್ದರು. ಆದರೆ ಕಳೆದ ರಾತ್ರಿಯೇ ಮಾಲಕನಿಗೆ ಹತ್ತಿರದವರು ಬಂದು ನಮ್ಮನ್ನು ಬೆದರಿಸಿದ್ದಾರೆ. ಅವರು ನಮಗೆ ತೊಂದರೆಯುಂಟು ಮಾಡುವ ಭಯವಿದೆ” ಎಂದು ಕಾಂಚೀಪುರಂ ಸಮೀಪದ ಪೆರಿಯಕರುಂಬೂರು ಗ್ರಾಮದ ನಿವಾಸಿಯಾಗಿರುವ ಕಾಶಿ ಹೇಳುತ್ತಾನೆ.

ತನ್ನನ್ನು ಹಾಗೂ ಹಲವು ಜೀತದಾಳುಗಳನ್ನು ರಕ್ಷಿಸಿದ ಸರಕಾರಿ ಅಧಿಕಾರಿಗಳ ಕಾಲಿಗೆ ಕಾಶಿ ಬೀಳುತ್ತಿರುವ ಮನಕಲಕುವ ದೃಶ್ಯ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು.

ಆ ಮರದ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾಶಿ ಮತ್ತು ಇತರ ಕಾರ್ಮಿಕರು ಪರಿಶಿಷ್ಟ ಇರುಳ ಸಮುದಾಯಕ್ಕೆ ಸೇರಿದವರಾಗಿದ್ದು, 14 ಮಂದಿಯನ್ನು ಹೊರತುಪಡಿಸಿ ಇತರರಿಗೆ ಅವರ ಮಾಲಕ ಬಿಡುಗಡೆ ಪತ್ರವನ್ನು ಇನ್ನೂ ನೀಡಿಲ್ಲ. ಈ ಪ್ರಮಾಣ ಪತ್ರ ದೊರೆತಲ್ಲಿ ಜೀತಮುಕ್ತಗೊಂಡ ಕಾರ್ಮಿಕರಿಗೆ ಕೇಂದ್ರ ಮತ್ರು ರಾಜ್ಯ ಸರಕಾರದ ಯೋಜನೆಗಳ ಪ್ರಯೋಜನ ದೊರೆಯುವುದಲ್ಲದೆ 20,000 ರೂ. ಸಹಾಯಧನವೂ ದೊರಕುತ್ತದೆ.

ಬುಧವಾರ ವೆಲ್ಲೂರು ಹಾಗೂ ಕಾಂಚೀಪುರಂನ ಕಂದಾಯ ಅಧಿಕಾರಿಗಳು ಎರಡು ಮರದ ಕಾರ್ಖಾನೆಗಳಿಂದ 42 ಜನರನ್ನು ರಕ್ಷಿಸಿದ್ದರು. ಹೆಚ್ಚಿನವರು ಪೆರಿಯಕರುಂಬೂರು ಗ್ರಾಮದವರಾಗಿದ್ದರೆ, ನಾಲ್ಕು ಕುಟುಂಬಗಳನ್ನು ಮಾಲಕ ನಟರಾಜನ್ ಮತ್ತಾತನ ಅಳಿಯ ಪ್ರಶಾಂತ್ ವಂತವಾಸಿ ಗ್ರಾಮದಿಂದ ಕರೆತಂದಿದ್ದರು.

ಜೀತದಾಳುಗಳ ರಕ್ಷಣಾ ಕಾರ್ಯಾಚರಣೆ ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್ ಸಹಯೋಗದೊಂದಿಗೆ ಹಾಗೂ ಬಿಡುಗಡೆಗೊಂಡ ಜೀತದಾಳುಗಳ ಸಂಘದ ಮಾಹಿತಿಯ ಮೇರೆಗೆ ನಡೆದಿತ್ತು.

ರಕ್ಷಿಸಲ್ಪಟ್ಟವರಲ್ಲಿ ಹತ್ತು ಮಂದಿ ಮಕ್ಕಳೂ ಸೇರಿದ್ದರು. ಹಲವು ಕುಟುಂಬಗಳು ತಾವು ಪಡೆದ ಕೇವಲ 10,000 ರೂ. ಹಾಗೂ 20,000 ಸಾಲಗಳ ಮರುಪಾವತಿಗಾಗಿ ಹಲವು ವರ್ಷ ಜೀತದಾಳುಗಳಾಗಿ ದುಡಿಯುತ್ತಿದ್ದರು. ಅವರಿಗೆ ಎರಡು ತಿಂಗಳಿಗೊಮ್ಮೆ ಅವರ ಗ್ರಾಮಗಳಿಗೆ ತೆರಳಲು ಅವಕಾಶ ನೀಡಲಾಗುತ್ತಿತ್ತಾದರೂ ಕೆಲವೇ ಗಂಟೆಗಳಲ್ಲಿ ಅವರು ವಾಪಸಾಗಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News