ಪೊಲೀಸರ ನಿರ್ಲಕ್ಷ್ಯ, ವೈದ್ಯರ ತಪ್ಪಿನಿಂದಾಗಿ ತಬ್ರೇಝ್ ಸಾವು: ತನಿಖಾ ವರದಿ

Update: 2019-07-12 09:25 GMT

ರಾಂಚಿ, ಜು.12: ಜಾರ್ಖಂಡ್ ರಾಜ್ಯದ ಸೆರೈಕೇಲ ಖಸ್ರ್ವಾನ್ ಜಿಲ್ಲೆಯಲ್ಲಿ ಕಳೆದ ತಿಂಗಳು ಗುಂಪು ಥಳಿತಕ್ಕೊಳಗಾಗಿ ಸಾವಿಗೀಡಾದ 24 ವರ್ಷದ ತಬ್ರೇಝ್ ಅನ್ಸಾರಿ ಪ್ರಕರಣದ ತನಿಖೆ ನಡೆಸಿದ ಜಿಲ್ಲಾಡಳಿತ ತನ್ನ ವರದಿಯಲ್ಲಿ ತಬ್ರೇಝ್ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ವೈದ್ಯರ ಕರ್ತವ್ಯಲೋಪದಿಂದ ಮೃತಪಟ್ಟಿದ್ದಾರೆಂದು ಹೇಳಿದೆ.

ಕಳೆದ ತಿಂಗಳು ತನ್ನ ಸ್ನೇಹಿತರ ಜತೆ ಸಾಗುತ್ತಿದ್ದ 24 ವರ್ಷದ ತಬ್ರೇಝ್ ಅನ್ಸಾರಿ ಮೇಲೆ ಗುಂಪೊಂದು ಮೋಟಾರ್ ಸೈಕಲ್ ಕಳ್ಳತನದ ಆರೋಪ ಹೊರಿಸಿ ‘ಜೈ ಶ್ರೀ ರಾಂ’, ‘ಜೈ ಹನುಮಾನ್’ ಹೇಳುವಂತೆ ಬಲವಂತಪಡಿಸಿ ಮಾರಣಾಂತಿಕವಾಗಿ ಥಳಿಸಿತ್ತು. ನಂತರ ಅವರು ಮೃತಪಟ್ಟಿದ್ದರು.

ಘಟನೆಯ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ತನಿಖಾ ತಂಡದಲ್ಲಿ ಉಪ ವಿಭಾಗೀಯ ಅಧಿಕಾರಿ ಹಾಗೂ ಜಿಲ್ಲಾ ಸಿವಿಲ್ ಸರ್ಜನ್ ಇದ್ದರು. ಘಟನಾ ಸ್ಥಳಕ್ಕೆ ಆಗಮಿಸುವಲ್ಲಿ ಸ್ಥಳೀಯ ಪೊಲೀಸರು ವಿಳಂಬಿಸಿದ್ದು ಮಾತ್ರವಲ್ಲದೆ ಯುವಕನಿಗೆ ಚಿಕಿತ್ಸೆ ನೀಡಿದ್ದ ವೈದ್ಯರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ತನಿಖಾ ವರದಿ ತಿಳಿಸಿದೆ.

ಘಟನೆಯ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ ತಬ್ರೇಝ್ ರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದರೂ ತಪಾಸಣೆ ನಡೆಸಿದ ಇಬ್ಬರು ವೈದ್ಯರು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡುವ ಬದಲು ಅವರನ್ನು ಜೈಲಿಗೆ ಕೊಂಡೊಯ್ಯಬಹುದು ಎಂದು ಹೇಳಿದ್ದರು. ನಾಲ್ಕು ದಿನಗಳ ನಂತರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

“ಆತ ಮುಸ್ಲಿಂ ಎಂಬ ಕಾರಣಕ್ಕೆ ನಿಷ್ಕರುಣೆಯಿಂದ ಥಳಿಸಲಾಗಿತ್ತು. ನನಗೆ ಯಾರೂ ಇಲ್ಲ, ನನ್ನ ಪತಿಯೇ ನನಗಿದ್ದ ಏಕೈಕ ಆಧಾರ, ನನಗೆ ನ್ಯಾಯ ಬೇಕು'' ಎಂದು ತಬ್ರೇಝ್ ಪತ್ನಿ ಶಹಿಸ್ತಾ ಪರ್ವೀನ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News