ವಿದ್ಯುತ್ ಸ್ವಾವಲಂಬನೆಯಲ್ಲಿ ಬಿಐಆರ್‌ಡಿ ಮುಂಚೂಣಿ: ಕೆ.ಲಕ್ಷ್ಮೀನಾರಾಯಣ

Update: 2019-07-12 14:11 GMT

ಮಂಗಳೂರು, ಜು.12: ಬೊಂದೇಲ್‌ನಲ್ಲಿರುವ ನಬಾರ್ಡ್ (ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್)ನ ಬ್ಯಾಂಕರ್ಸ್‌ ಇನ್‌ಸ್ಟಿಟ್ಯೂಟ್ ಆಫ್ ರೂಲರ್ ಡೆವಲಪ್‌ಮೆಂಟ್ (ಬಿಐಆರ್‌ಡಿ) ಕ್ಯಾಂಪಸ್‌ನಲ್ಲಿ ಸೌರಶಕ್ತಿ ಘಟಕವನ್ನು ಅಳವಡಿಸಿದೆ. ಇದರಿಂದ 90 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಮೂಲಕ ಸ್ವಾವಲಂಬನೆ ಸಾಧಿಸಿದೆ ಎಂದು ನಬಾರ್ಡ್ ಜಂಟಿ ನಿರ್ದೇಶಕ ಕೆ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

ಅವರು ಶುಕ್ರವಾರ ಬೋಂದೇಲ್‌ನಲ್ಲಿರುವ ಬಿಐಆರ್‌ಡಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಸರ ಸ್ನೇಹಿ ಕ್ಯಾಂಪಸ್‌ಗೆ ರೂಪಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಬಿಐಆರ್‌ಡಿ ಆವರಣದಲ್ಲಿ ಸಣ್ಣ ಮಟ್ಟದಲ್ಲಿ ಮಳೆ ಕೊಯ್ಲು ಆರಂಭಿಸಲಾಗಿದೆ. ಮುಂದೆ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುವ ತಯಾರಿ ನಡೆದಿದೆ. ಜೊತೆಗೆ ಕ್ಯಾಂಪಸ್‌ನ ಲ್ಯಾಂಡ್‌ಸ್ಕೇಪಿಂಗ್‌ಗೆ ಯೋಜನೆ ರೂಪಿಸಲಾಗಿದೆ. ನೀರಿನ ಮಿತ ಬಳಕೆಗಾಗಿ ಈಗಿರುವ ತುಂತುರು ನೀರಾವರಿಯನ್ನು ಹನಿ ನೀರಾವರಿ ಪದ್ದತಿಗೆ ಬದಲಾಯಿಸಲಾಗುವುದು. ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್‌ಗಾಗಿ ಕ್ರಮಗಳು ಆರಂಭಗೊಂಡಿವೆ ಎಂದವರು ಹೇಳಿದರು.

ಕೃಷಿ ಹಾಗೂ ಗ್ರಾಮೀಣ ಭಾಗದ ಹಲವು ಸಮಸ್ಯೆ-ಸವಾಲುಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಜತೆಗೆ ಸೇರಿಕೊಂಡು ನಬಾರ್ಡ್ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ಕನಸುಗಳೊಂದಿಗೆ ಕೇಂದ್ರ-ರಾಜ್ಯ ಸರಕಾರದ ಮುಂದಾಳತ್ವದಲ್ಲಿ ನಬಾರ್ಡ್ ಸಾಲ ವಿತರಣೆ ನಡೆಸುತ್ತಿದೆ ಎಂದರು.

ನಬಾರ್ಡ್‌ನ ಅಂಗಸಂಸ್ಥೆಯಾದ ಬಿಐಆರ್‌ಡಿಯು ಕೃಷಿ, ಬ್ಯಾಂಕಿಂಗ್, ಪರಿಸರ, ಹವಾಮಾನ ಬದಲಾವಣೆ, ಗ್ರೀನ್ ಫೈನಾನ್ಸಿಂಗ್, ಹಣಕಾಸು ಸಂಸ್ಥೆಗಳು, ಸ್ವಸಹಾಯ ಸಂಘಗಳು, ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸ್ವಯಂಸೇವಾ ಸಂಸ್ಥೆಗಳು, ಸರಕಾರಿ ಇಲಾಖೆಗಳು ಹಾಗೂ ಪಾಲುದಾರ ಸಂಸ್ಥೆಗಳಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದರು.

ಬಿಐಆರ್‌ಡಿ ತನ್ನ ಆಶ್ರಿತ ಸಂಸ್ಥೆಗಳಿಗಾಗಿ ದೇಶ ಮತ್ತು ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಕಾರ್ಯಾಗಾರಗಳನ್ನು ನಡೆಸಿದ ಹೆಗ್ಗಳಿಕೆ ಹೊಂದಿದೆ. ಬಿಐಆರ್‌ಡಿ ಗುಣಮಟ್ಟಕ್ಕಾಗಿ ಐಎಸ್‌ಒ 9001:2015 ಪ್ರಮಾಣಪತ್ರ ಪಡೆದಿದೆ. ಸದ್ಯದಲ್ಲಿಯೇ ಬಿಐಆರ್‌ಡಿ ಸ್ವಂತ ವೆಬ್‌ಸೈಟ್ ಹೊಂದಲಿದೆ ಎಂದರು.

ನಬಾರ್ಡ್ ಆಸ್ತಿ ವೃದ್ಧಿ: ನಬಾರ್ಡ್ ತನ್ನ ಆಸ್ತಿಯನ್ನು 2018-19ರ ಸಾಲಿಗೆ 4.87 ಲಕ್ಷ ಕೋಟಿ ರೂ.ಗೆ ವೃದ್ಧಿಸಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಆಸ್ತಿಯಲ್ಲಿ ಶೇ.15ರಷ್ಟು ವೃದ್ಧಿಯಾಗಿದೆ. ನಿವ್ವಳ ಎನ್‌ಪಿಎ ಶೂನ್ಯಕ್ಕೆ ತಲುಪಿದೆ. ದೀರ್ಘ ಮತ್ತು ಕಡಿಮೆ ಅವಧಿಯ ಸಾಲ ಸೌಲಭ್ಯಕ್ಕಾಗಿ ತಲಾ 90,000 ಕೋಟಿ ರೂ. ನಿಗದಿ ಪಡಿಸಲಾಗಿದೆ. ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಅಡಿಯಲ್ಲಿ 330 ಲಕ್ಷ ಹೆಕ್ಟೇರ್ ನೀರಾವರಿ ಭೂಮಿ ಅಭಿವೃದ್ಧಿ ಪಡಿಸಲಾಗಿದೆ. 4.68 ಲಕ್ಷ ಕಿ.ಮೀ ಗ್ರಾಮೀಣ ರಸ್ತೆಗಳನ್ನು ಹಾಗೂ 11.45 ಕಿ.ಮೀ ಗ್ರಾಮೀಣ ಸೇತುವೆಗಳನ್ನು ನಿರ್ಮಿಸಿರುವುದಾಗಿ ಜಂಟಿ ನಿರ್ದೇಶಕರು ವಿವರಿಸಿದರು.

ದೀರ್ಘಾವಧಿ ನೀರಾವರಿ ನಿಧಿಯಡಿಯಲ್ಲಿ 75,770 ಕೋಟಿ ರೂ. ಮಂಜೂರು ಆಗಿದೆ. ಆ ಪೈಕಿ 34,249 ಕೋಟಿ ರೂ.ನ್ನು ವಿತರಿಸಲಾಗಿದೆ. ಅದರಡಿ ಹೆಚ್ಚುವರಿ 81.38 ಹೆಕ್ಟೇರ್ ನೀರಾವರಿ ಜಮೀನನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿದ್ದು, 12 ಹೆಕ್ಟೇರ್ ಜಮೀನನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕೆ.ಲಕ್ಷ್ಮೀನಾರಾಯಣ ತಿಳಿಸಿದರು.

ಸ್ವಚ್ಛ ಭಾರತಕ್ಕಾಗಿ 15,000 ಕೋಟಿ ರೂ. ನಿಗದಿಯಾಗಿದೆ. ಈ ಪೈಕಿ 8,698 ಕೋಟಿ ರೂ. ಬಿಡುಗಡೆಯಾಗಿದೆ. ಮೂರು ಕೋಟಿ ವೈಯಕ್ತಿಕ ಶೌಚಾಲಯಗಳು, 1,500 ಶೌಚಾಲಯ ಸಮುಚ್ಛಯಗಳ ನಿರ್ಮಾಣದ ಗುರಿಯನ್ನು ಹಾಕಿಕೊಂಡಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆಗೆ ನಬಾರ್ಡ್ ಫಂಡಿಂಗ್ 14,645 ಕೋಟಿ ರೂ. ನಿಗದಿಯಾಗಿದ್ದು, ಈಗಾಗಲೇ 10,679 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 89 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಇ-ಶಕ್ತಿ ಪೈಲೆಟ್ ಯೋಜನೆಯಡಿ ದೇಶದ ನೂರಕ್ಕೂ ಅಧಿಕ ಜಿಲ್ಲೆಗಳ 4.34 ಲಕ್ಷಕ್ಕೂ ಹೆಚ್ಚಿನ ಸ್ವಸಹಾಯ ಗುಂಪುಗಳ ಖಾತೆಗಳನ್ನು ಡಿಜಿಟೈಸ್ ಮಾಡಲಾಗಿದೆ. ಇದರಿಂದ 4.8 ಮಿಲಿಯಕ್ಕೂ ಅಧಿಕ ಕುಟುಂಬಗಳಿಗೆ ಅನುಕೂಲವಾಗಲಿದೆ. ನವ್ಯೋದ್ಯಮಿಗಳ ಪ್ರೋತ್ಸಾಹಕ್ಕಾಗಿ ನಬಾರ್ಡ್ ‘ನಬ್‌ವೆಂಚರ್’ ಹೆಸರಿನ ಅಧೀನ ಸಂಸ್ಥೆಯನ್ನು ಆರಂಭಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪ ಮಹಾಪ್ರಬಂಧಕ (ಶೈಕ್ಷಣಿಕ) ಕೆ.ಜಿ. ರಂಜಿತ್‌ಕುಮಾರ್, ಸಹಾಯಕ ಮಹಾ ಪ್ರಬಂಧಕರಾದ ರಮೇಶ್ ವೇಣು ಗೋಪಾಲ್ ಮತ್ತು ವಿ.ಎಸ್.ಶೆಟ್ಟಿ ಉಪಸ್ಥಿತರಿದ್ದರು.

ಬಳಿಕ ನಬಾರ್ಡ್ ಸಂಸ್ಥಾಪನಾ ದಿನಾಚರಣೆ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯುಡಪಡಿತ್ತಾಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News