ಉ.ಪ್ರದೇಶ: ಮುಸ್ಲಿಂ ವಿದ್ಯಾರ್ಥಿಗಳಿಗೆ ಹಲ್ಲೆಗೈದು ‘ಜೈಶ್ರೀರಾಂ’ ಹೇಳುವಂತೆ ಬಲವಂತ

Update: 2019-07-12 14:12 GMT

ಲಕ್ನೋ, ಜು.12: ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಗುಂಪು ‘ಜೈಶ್ರೀರಾಂ’ ಎಂದು ಹೇಳುವಂತೆ ಒತ್ತಡ ಹೇರಿದ ಘಟನೆ ಉತ್ತರಪ್ರದೇಶದ ಉನ್ನಾವೊದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮದ್ರಸದ ನಾಲ್ಕು ವಿದ್ಯಾರ್ಥಿಗಳು ಉನ್ನಾವೊದ ಸರಕಾರಿ ಪಿಯು ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅಲ್ಲಿಗೆ ಬಂದ ನಾಲ್ವರು ಕ್ರಿಕೆಟ್ ಆಡುತ್ತಿದ್ದವರನ್ನು ಅಣಕಿಸತೊಡಗಿದರು. ಬಳಿಕ ವಿದ್ಯಾರ್ಥಿಗಳ ಕೈಯಲ್ಲಿದ್ದ ಬ್ಯಾಟನ್ನು ಕಿತ್ತುಕೊಂಡು ಜೈಶ್ರೀರಾಂ ಪಠಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಬ್ಯಾಟಿನಿಂದ ಹಲ್ಲೆ ನಡೆಸಿದ್ದಲ್ಲದೆ ಅವರನ್ನು ಎಳೆದಾಡಿದ್ದಾರೆ. ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಕಲ್ಲೆಸೆದು ಅವರ ಸೈಕಲನ್ನು ಜಖಂಗೊಳಿಸಿದ್ದಾರೆ ಎಂದು ಮದ್ರಸದ ಪ್ರಾಂಶುಪಾಲ ನಿಸಾರ್ ಅಹ್ಮದ್ ಮಿಸ್ಬಾಹಿ ಆರೋಪಿಸಿದ್ದಾರೆ.

ಆರೋಪಿಗಳನ್ನು ಆದಿತ್ಯಾ ಶುಕ್ಲ, ಕ್ರಾಂತಿ, ಕಮಲ್ ಎಂದು ಗುರುತಿಸಲಾಗಿದ್ದು ಇನ್ನೊಬ್ಬ ಆರೋಪಿಯ ಗುರುತು ಪತ್ತೆಯಾಗಿಲ್ಲ. ಮದ್ರಸದ ವಿದ್ಯಾರ್ಥಿಗಳು ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಇನ್ನೊಂದು ತಂಡದವರು ಆಗಮಿಸಿದ್ದಾರೆ. ಎರಡು ತಂಡಗಳ ಮಧ್ಯೆ ಜಗಳವಾಗಿದೆ. ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಉಮೇಶ್ ತ್ಯಾಗಿ ಹೇಳಿದ್ದಾರೆ.

ಆರೋಪಿಗಳು ತಮ್ಮ ಫೇಸ್‌ ಬುಕ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಇದರ ಆಧಾರದಲ್ಲಿ ಅವರನ್ನು ಗುರುತಿಸಲಾಗಿದೆ. ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದ್ದು, ಬಂಧನಕ್ಕೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News