×
Ad

ಬೀಫ್ ಸೂಪ್ ಕುಡಿಯುವ ಫೋಟೊ ಪೋಸ್ಟ್: ಯುವಕನಿಗೆ ಥಳಿಸಿದ ದುಷ್ಕರ್ಮಿಗಳು

Update: 2019-07-12 20:32 IST
ಮುಹಮ್ಮದ್ ಫಿಸಾನ್

ಚೆನ್ನೈ, ಜು. 12: ಫೇಸ್‌ಬುಕ್ ಖಾತೆಯಲ್ಲಿ ಬೀಫ್ ಸೂಪ್ ಸೇವಿಸುತ್ತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದ ನಾಗಪಟ್ಟಿಣಂ ಜಿಲ್ಲೆಯ ಪೂರ್ವಚೇರಿ ಗ್ರಾಮದ 24 ವರ್ಷದ ಯುವಕನಿಗೆ ಅದೇ ಗ್ರಾಮದ ನಾಲ್ವರ ತಂಡವೊಂದು ಥಳಿಸಿದೆ. ಗಾಯಗೊಂಡ ಯುವಕನನ್ನು ಮುಹಮ್ಮದ್ ಫಿಸಾನ್ ಎಂದು ಗುರುತಿಸಲಾಗಿದೆ.

ಈತ ಝೆರಾಕ್ಸ್ ಅಂಗಡಿ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ.

ಹಲ್ಲೆ ಘಟನೆಗೆ ಸಂಬಂಧಿಸಿ ಕಿಲ್ವೆಲ್ಲೂರ್ ಠಾಣೆಯ ಪೊಲೀಸರು ಎನ್. ದಿನೇಶ್ ಕುಮಾರ್ (28), ಆರ್, ಅಗಥಿಯನ್ (29), ಗಣೇಶ್ ಕುಮಾರ್ (27) ಹಾಗೂ ಎಂ. ಮೋಹನ್ ಕುಮಾರ್ (28) ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ದಿನೇಶ್ ಕುಮಾರ್ ಎಎಂಎಂಕೆಯ ಸದಸ್ಯ ಹಾಗೂ ಪಕ್ಷದ ಸ್ಥಳೀಯ ಸಮಿತಿಯ ಪದಾಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಾತಿನಿಂದ ಆರಂಭವಾದ ಜಗಳ ಹಿಂಸೆಗೆ ತಿರುಗಿತು. ನಾಲ್ವರ ಗುಂಪು ಕಬ್ಬಿಣದ ಸಲಾಕೆ, ಮರದ ದೊಣ್ಣೆಯಿಂದ ಮುಹಮ್ಮದ್ ಫಿಸಾನ್‌ಗೆ ಥಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಮುಹಮ್ಮದ್ ಫಿಸಾನ್ ಅವರನ್ನು ನಾಗಪಟ್ಟಿಣಂ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಫಿಸಾನ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News