×
Ad

ಚತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ: ಓರ್ವ ನಕ್ಸಲ್ ಸಾವು

Update: 2019-07-12 22:23 IST

ದಾಂತೆವಾಡ (ಚತ್ತೀಸ್‌ಗಢ), ಜು. 12: ಚತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆ ನಡೆಸಿದ ಎನ್‌ ಕೌಂಟರ್‌ನಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ವರು ಪೊಲೀಸರನ್ನು ಎಪ್ರಿಲ್ ‌ನಲ್ಲಿ ಹತ್ಯೆಗೈದ ಘಟನೆಯಲ್ಲಿ ಭಾಗಿಯಾಗಿದ್ದ ನಕ್ಸಲ್ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದಾಂತೆವಾಡದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್‌ಜಿ) ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಸುಕ್ಮಾದ ಟೋಂಗ್‌ಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿಸ್ಸೆ ಡಬ್ಬಾ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಗೆ ಎನ್‌ಕೌಂಟರ್ ಆರಂಭವಾಯಿತು ಎಂದು ದಾಂತೆವಾಡದ ಪೊಲೀಸ್ ಅಧೀಕ್ಷಕ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ದಾಂತೆವಾಡ ಹಾಗೂ ಸುಕ್ಮಾ ಜಿಲ್ಲೆಯ ಗಡಿಯಲ್ಲಿ ಭದ್ರತಾ ಪಡೆ ಎರಡು ದಿನಗಳ ಹಿಂದೆಯೇ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಡಿಆರ್‌ಜಿ ತಂಡ ಮಿಸ್ಸೆ ಡಬ್ಬಾ ಪ್ರದೇಶವನ್ನು ಸುತ್ತುವರಿದ ಸಂದರ್ಭ ಎನ್‌ಕೌಂಟರ್ ನಡೆಯಿತು ಎಂದು ಅವರು ತಿಳಿಸಿದ್ದಾರೆ.

ಗುಂಡಿನ ಚಕಮಕಿ ಬಳಿಕ ನಕ್ಸಲೀಯರು ಪರಾರಿಯಾದರು. ಆ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದ ಸಂದರ್ಭ ಮೃತದೇಹವೊಂದು ಪತ್ತೆಯಾಗಿದ್ದು, ಇದು ಮಾವೋವಾದಿ ಕಾಟೆಕಲ್ಯಾಣ್ ಪ್ರದೇಶ ಸಮಿತಿ ಸದಸ್ಯ ಹುರ್ರಾನದ್ದು ಎಂದು ಗುರುತಿಸಲಾಗಿದೆ. ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ರೆಫಲ್‌ಗಳು ಪತ್ತೆಯಾಗಿವೆ ಎಂದು ಪಲ್ಲವ ತಿಳಿಸಿದ್ದಾರೆ. ‘‘ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಕಂಡು ಬಂದ ರಕ್ತದ ಕಲೆಗಳನ್ನು ಗಮನಿಸಿದರೆ, ಹೆಚ್ಚು ಮಂದಿ ನಕ್ಸಲೀಯರು ಗಾಯಗೊಂಡಿರುವ ಹಾಗೂ ಸಾವನ್ನಪ್ಪಿರುವ ಸಾಧ್ಯತೆ ಇದೆ’’ ಎಂದು ಪಲ್ಲವ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News