ಬೃಹತ್ ಅಕ್ರಮ ಶಸ್ತ್ರಾಸ್ತ್ರ ವಶದ ದಾಖಲೆಗಳನ್ನು ಸೇನೆಯ ಮೇಜರ್ ನಾಶಗೊಳಿಸಿದ್ದರು!

Update: 2019-07-12 17:57 GMT
ಮಣಿಪುರ ಹೈಕೋರ್ಟ್

ಹೊಸದಿಲ್ಲಿ,ಜು.12: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಣಿಪುರದ ಇಂಫಾಲದ ಎಂ-ಸೆಕ್ಟರ್‌ನಲ್ಲಿಯ ಸೇನೆಯ 3 ಕಾರ್ಪ್ಸ್ ಇಂಟೆಲಿಜೆನ್ಸ್ ಆ್ಯಂಡ್ ಸರ್ವೈಲನ್ಸ್ ಯುನಿಟ್(ಸಿಐಎಸ್‌ಯು)ನ ಕಮಾಂಡಿಂಗ್ ಆಫೀಸರ್ ಆಗಿರುವ ಲೆ.ಕ.ಆರ್.ಪಿ.ನಂದಾ ಅವರು,2018 ಜುಲೈನಲ್ಲಿ ಯುನಿಟ್‌ನ ಆವರಣದೊಳಗೆ ಭಾರೀ ಪ್ರಮಾಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನ್ನದೇ ಯುನಿಟ್‌ನ ಮೇ.ಬಿ.ಎಸ್.ರಾಠೋಡ್ ನಾಶಗೊಳಿಸಿದ್ದರು ಎಂದು ಸೇನೆಯ ಆಂತರಿಕ ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತನ್ನ ಪೂರ್ವಾಧಿಕಾರಿ ಲೆ.ಕ.ಧರಮ್‌ವೀರ ಸಿಂಗ್ ಅವರ ವಿರುದ್ಧ ನಡೆಯುತ್ತಿರುವ ವಿಚಾರಣೆಯಲ್ಲಿ ಸಾಕ್ಷಿಯಾಗಿ ನಂದಾ ಈ ಹೇಳಿಕೆಯನ್ನು ನೀಡಿದ್ದಾರೆ. ಸಿಂಗ್ ಅವರು ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಅರುಣಾಚಲ ಪ್ರದೇಶದ ಪಾಸಿಘಾಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ನಂದಾ ಅವರು 2018,ಜುಲೈ 2ರಂದು ನಾಗಾಲ್ಯಾಂಡ್‌ನ ದಿಮಾಪುರದ 3 ಕಾರ್ಪ್ಸ್‌ನ ಮುಖ್ಯಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಯುನಿಟ್ ಕಮಾಂಡಿಂಗ್ ಆಫೀಸರ್(ಸಿಒ)ಗೆ ಬರೆದಿದ್ದ ಪತ್ರದ ಆಧಾರದಲ್ಲಿ ಈ ವಿಚಾರಣೆ ನಡೆಯುತ್ತಿದೆ. 2018,ಜು.1ರಂದು ಎಂ-ಸೆಕ್ಟರ್‌ನೊಳಗೆ ತನ್ನ ಪೂರ್ವಾಧಿಕಾರಿಯ ವಶದಲ್ಲಿ ಶಸ್ತ್ರಾಶ್ತ್ರಗಳು ಪತ್ತೆಯಾಗಿದ್ದವು ಎಂದು ನಂದಾ ಆರೋಪಿಸಿದ್ದರು. ಆದರೆ ಜು.1ರಂದು ಸಿಂಗ್ ಅವರನ್ನು ನಂದಾ ಮತ್ತು ದಾಖಲೆಗಳನ್ನು ನಾಶಗೊಳಿಸಿದ್ದಾರೆ ಎನ್ನಲಾಗಿರುವ ರಾಠೋಡ್ ಉಪಸ್ಥಿತಿಯಲ್ಲಿ ‘ಅಕ್ರಮ’ವಾಗಿ ಬಂಧಿಸಿ ದಿಮಾಪುರಕ್ಕೆ ಕರೆದೊಯ್ಯಲಾಗಿತ್ತು. ಅಂದರೆ ಸಿಂಗ್ ಅನುಪಸ್ಥಿತಿಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಬಿಗಿಭದ್ರತೆಯ ಸೇನಾ ನೆಲೆಯಲ್ಲಿ 2016ರಿಂದಲೂ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದ್ದ ಗಂಭೀರ ಆರೋಪವನ್ನು ಉಲ್ಲೇಖಿಸಲಾಗಿದ್ದ ನಂದಾರ ಪತ್ರವನ್ನು ದಿಮಾಪುರದ ಸಿಒ ಜು.2ರಂದು ಸ್ವೀಕರಿಸಿದ್ದರಾದರೂ ಸೇನೆಯ ನಿಯಮದಂತೆ ತನಗೆ ಆರೋಪದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಮತ್ತು ವಿವರಣೆಯನ್ನು ಕೇಳಿರಲಿಲ್ಲ,ಬದಲಿಗೆ ದಿಮಾಪುರದಲ್ಲಿ ಎಂದಿನಂತೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪದಕ ಪುರಸ್ಕೃತ ಅಧಿಕಾರಿಯಾಗಿರುವ ಸಿಂಗ್ ಅವರು 2016,ಸೆ.9ರಂದು ಸಿಒಗೆ ಪತ್ರವೊಂದನ್ನು ಬರೆದು,ಯುನಿಟ್‌ನ ಕೆಲವು ‘ದುರುಳ’ಅಧಿಕಾರಿಗಳು ತನ್ನನ್ನು ಸುಳ್ಳು ಆರೋಪಗಳಲ್ಲಿ ಸಿಲುಕಿಸುತ್ತಿದ್ದಾರೆ ಮತ್ತು ತನ್ನನ್ನು ಬಲಿಪಶುವನ್ನಾಗಿಸು ತ್ತಿದ್ದಾರೆ ಎಂದು ಆರೋಪಿಸಿದ್ದು ಮಹತ್ವದ್ದಾಗಿದೆ. ಐವರು ಮಣಿಪುರಿ ಯುವಕರ ಅಕ್ರಮ ಹತ್ಯೆಗಳು ಮತ್ತು ಹಫ್ತಾ ವಸೂಲಿಯಲ್ಲಿ ಭಾಗಿಯಾಗಿರುವ ಕೆಲವು ಅಧಿಕಾರಿಗಳ ಬಗ್ಗೆ ಸಿಂಗ್ ಈ ಪತ್ರದಲ್ಲಿ ಸಿಒಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News