ಪೌರತ್ವ ಕುರಿತ ಕವಿತೆ: 10 ಕವಿಗಳು, ಹೋರಾಟಗಾರರ ವಿರುದ್ಧ ಎಫ್‌ಐಆರ್

Update: 2019-07-12 18:08 GMT

ದಿಸ್ಪುರ್,ಜು.12: ರಾಜ್ಯದ ಪೌರತ್ವ ವಿಷಯದ ಬಗ್ಗೆ ಕವಿತೆ ಬರೆದ ಆರೋಪದಲ್ಲಿ ಅಸ್ಸಾಂ ಪೊಲೀಸರು ಹತ್ತು ಪ್ರಮುಖ ಕವಿಗಳು ಮತ್ತು ಹೋರಾಟಗಾರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಂಧಿತರ ಪೈಕಿ ಬೆಂಗಾಳಿ ಮೂಲದ ಮುಸ್ಲಿಂ ಕವಿಗಳೇ ಹೆಚ್ಚಾಗಿದ್ದು, ಇವರೆಲ್ಲ ಮಿಯಾ ಎಂಬ ಪ್ರಾಂತೀಯ ಭಾಷೆಯಲ್ಲಿ ಬರೆಯುತ್ತಾರೆ. ಈ ಹಾಡನ್ನು ಖಾಝಿ ಶರೋವರ್ ಹುಸೈನ್ ಬರೆದಿದ್ದಾರೆ. ಪ್ರಣಬ್‌ಜಿತ್ ದೊಲೊಯಿ ಎಂಬವರು ಸಲ್ಲಿಸಿದ ದೂರಿನ ಆಧಾರದಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗುವಾಹಟಿ ಕೇಂದ್ರ ಪೊಲೀಸ್ ಸಹಾಯಕ ಕಮಿಷನರ್ ಧರ್ಮೇಂದ್ರ ದಾಸ್ ತಿಳಿಸಿದ್ದು, ಸದ್ಯ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಪಿಗಳ ಉದ್ದೇಶ ಅಸ್ಸಾಮಿಗಳನ್ನು ಜಗತ್ತಿನ ದೃಷ್ಟಿಯಲ್ಲಿ ಮತಾಂಧರು ಎಂದು ಚಿತ್ರಿಸುವುದಾಗಿದೆ. ಇದು ಅಸ್ಸಾಂ ಜನತೆಗೆ ಒಡ್ಡಿರುವ ಅಪಾಯವಾಗಿದೆ. ಜೊತೆಗೆ ರಾಷ್ಟ್ರೀಯ ಭದ್ರತೆ ಮತ್ತು ಸೌಹಾರ್ದಯುತ ಸಾಮಾಜಿಕ ವಾತಾವರಣಕ್ಕೂ ಅಪಾಯ ಒಡ್ಡುತ್ತಿದೆ. ಈ ಹಾಡಿನ ನಿಜವಾದ ಉದ್ದೇಶ ಅವರ ಸಮುದಾಯವನ್ನು ವ್ಯವಸ್ಥೆಯ ವಿರುದ್ಧ ಪ್ರಚೋದಿಸುವುದೇ ಆಗಿದೆ ಎಂದು ದೂರುದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯ ಅಂತಿಮ ವರದಿ ಸಲ್ಲಿಸುವ ವಾರಗಳ ಮೊದಲು ಈ ದೂರು ದಾಖಲಾಗಿದೆ.

ಪೊಲೀಸರ ಕ್ರಮಕ್ಕೆ ಸಾರ್ವತ್ರಿಕವಾಗಿ ಖಂಡನೆಗಳು ವ್ಯಕ್ತವಾಗಿದ್ದು, ಟ್ವಿಟರ್‌ನಲ್ಲೂ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಥಳಿಸಿ ಹತ್ಯೆ ನಡೆಸುವವರು ಸಮಾಜದಲ್ಲಿ ಮುಕ್ತವಾಗಿ ನಡೆದಾಡುತ್ತಿರುವಾಗ ಕವಿಗಳ ವಿರುದ್ಧ ಪ್ರಕರಣ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ ಎಂದು ಅನೇಕ ಟ್ಟಿಟರಿಗರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News