ಭಾರತದ ಗಡಿಯೊಳಗೆ ಚೀನಾ ಸೇನೆ ಪ್ರವೇಶ

Update: 2019-07-13 03:46 GMT

ಶ್ರೀನಗರ, ಜು.13: ಲಡಾಕ್ ವಿಭಾಗದ ಡೆಮ್‌ಚಾಕ್ ವಲಯದಲ್ಲಿ ಭಾರತೀಯ ಪ್ರಾಂತ್ಯದ ಐದು ಕಿಲೋಮೀಟರ್ ವ್ಯಾಪ್ತಿಯವರೆಗೆ ಚೀನಾ ಸೈನಿಕರು ಕಳೆದ ವಾರ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ ನಡೆದದ್ದೇನು ಎಂಬ ಬಗ್ಗೆ ಮಾಧ್ಯಮಗಳಲ್ಲಿ ಭಿನ್ನ ವರದಿಗಳು ಬಂದಿವೆ.

ಹೊಸದಿಲ್ಲಿಯಲ್ಲಿರುವ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದ್ದು, ದಲೈಲಾಮಾ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲ ಟಿಬೆಟಿಯನ್ನರು ತಮ್ಮ ಧ್ವಜವನ್ನು ಹಾರಿಸಿದರು. ಆಗ ಚೀನಾ ಸೈನಿಕರು ಭಾರತೀಯ ಪ್ರದೇಶವನ್ನು ಪ್ರವೇಶಿಸಿದರು ಎಂದು ವಿವರಿಸಿದೆ.

ಟಿಬೆಟ್ ನಿರಾಶ್ರಿತರು ಧ್ವಜಾರೋಹಣ ಮಾಡಿದ್ದನ್ನು ಪ್ರತಿಭಟಿಸುವ ಸಲುವಾಗಿ ಜುಲೈ 6ರಂದು ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು ಆಗಮಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಟಿಬೆಟಿಯನ್ನರು ದಲೈಲಾಮಾ ಅವರ 84ನೇ ಹುಟ್ಟುಹಬ್ಬವನ್ನು ಆಚರಿಸಿದರು.

ಭಾರತೀಯ ಸೇನೆಯ ಸಿಬ್ಬಂದಿ ಕೂಡಾ ಸ್ಥಳದಲ್ಲಿ ಹಾಜರಿದ್ದ ಕಾರಣ, ಚೀನಾ ಸೈನಿಕರು ಮತ್ತಷ್ಟು ಮುನ್ನುಗ್ಗಲು ಅವಕಾಶ ನೀಡಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ನಿರಾಶ್ರಿತರ ಕ್ರಮವನ್ನು ಪರಿಶೀಲಿಸುವುದಾಗಿ ಭಾರತೀಯ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಚೀನಿ ಸೇನೆ ವಾಪಸ್ಸಾಯಿತು ಎಂದು ತಿಳಿದುಬಂದಿದೆ.

ಏತನ್ಮಧ್ಯೆ ಟೈಮ್ಸ್ ನೌ ವರದಿ ಮಾಡಿರುವ ಪ್ರಕಾರ, "ಚೀನಿ ಗುಂಪು ಭಾರತದ ವ್ಯಾಪ್ತಿಯ ಡೆಮ್‌ಚಾಕ್‌ನಲ್ಲಿ ಸುಮಾರು ಆರು ಕಿಲೋಮೀಟರ್ ಬಂದು ಭಾರತೀಯ ನೆಲದಲ್ಲಿ ಚೀನಾದೇಶದ ಧ್ವಜವನ್ನು ನೆಟ್ಟಿತು". ಈ ಕುರಿತ ಚಿತ್ರವನ್ನು ಕೂಡಾ ಟೈಮ್ಸ್ ನೌ ಶೇರ್ ಮಾಡಿದೆ. ಡೆಮ್‌ಚೋಕ್ ಸರಪಂಚ ಉರ್ಗೈನ್ ಚೋದನ್ ಅವರನ್ನು ಈ ಸುದ್ದಿವಾಹಿನಿ ಮಾತನಾಡಿಸಿದ್ದು, "ಮೂರು ಕಡೆಗಳಿಂದ ಆಗಮಿಸಿದ ಜನ ಜತೆಯಾಗಿ ದಲೈಲಾಮಾ ಅವರ ಹುಟ್ಟುಹಬ್ಬ ಆಚರಿಸಲು ಸೇರಿದ್ದರು. ನಾವು ರಾಷ್ಟ್ರಧ್ವಜ, ಟಿಬೇಟಿಯನ್ ಧ್ವಜ ಹಾಗೂ ಬೌದ್ಧ ಧ್ವಜವನ್ನು ಹಾಕುತ್ತೇವೆ. ಆದರೆ ಯಾರನ್ನೂ ಪ್ರಚೋದಿಸುವುದಿಲ್ಲ. ಆದರೆ ಇದರಿಂದ ಪ್ರಚೋದಿತರಾಗಿ ಸೈನಿಕರು ಆರೇಳು ಕಿಲೋಮೀಟರ್ ಒಳಕ್ಕೆ ಬಂದು ತಮ್ಮ ಧ್ವಜ ನೆಟ್ಟಿದ್ದಾರೆ" ಎಂದು ಅವರು ಹೇಳಿದ್ದಾರೆ.

ಸೇನೆಯ ಮೂಲಗಳನ್ನು ಉಲ್ಲೇಖಿಸಿರುವ ಎಎನ್‌ಐ, "ಚೀನಿ ಸೇನೆ ಭಾರತದ ಗಡಿಯೊಳಕ್ಕೆ ಬಂದಿಲ್ಲ. ನಾಗರಿಕ ಉಡುಪಿನಲ್ಲಿ ಆಗಮಿಸಿದ ಕೆಲ ಚೀನಿ ಸೈನಿಕರು ಖಾಸಗಿ ವಾಹನದಲ್ಲಿ ತಮ್ಮ ಬದಿಯ ವಾಸ್ತವ ನಿಯಂತ್ರಣ ರೇಖೆ ಬಳಿ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಗ್ರಾಮಸ್ಥರು ದಲೈಲಾಮಾ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದರು" ಎಂದು ವಿವರಿಸಿದೆ.

ವಾಸ್ತವ ನಿಯಂತ್ರಣ ರೇಖೆಯ 23 ವಿವಾದಿತ ಮತ್ತು ಸೂಕ್ಷ್ಮ ಪ್ರದೇಶಗಳ ಪೈಕಿ ಡೆಮ್‌ಚೋಕ್ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News