ಆಂಧ್ರ ಸಿಎಂ ವಿರುದ್ಧ ಹಕ್ಕುಚ್ಯುತಿ ನೋಟಿಸ್

Update: 2019-07-13 04:01 GMT

ಹೈದರಾಬಾದ್, ಜು.13: ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ 2014-19ರ ಅವಧಿಯಲ್ಲಿ ರೈತರು ಪಡೆದ ಕೃಷಿ ಸಾಲದ ಮೇಲಿನ ಬಡ್ಡಿಮನ್ನಾ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ವೈ.ಎಸ್.ಜಗನ್ಮೋಹನ ರೆಡ್ಡಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವ ಸಂಬಂಧ ತೆಲುಗುದೇಶಂ ಪಕ್ಷ ನೋಟಿಸ್ ನೀಡಿದೆ.

ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಗುರುವಾರ ರಾಜ್ಯ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ, "ಸಕಾಲಿಕವಾಗಿ ಬ್ಯಾಂಕಿಗೆ ಕೃಷಿ ಸಾಲವನ್ನು ಮರುಪಾವತಿ ಮಾಡಿದ ರೈತರಿಗೆ ಹಿಂದಿನ ಟಿಡಿಪಿ ಸರ್ಕಾರ ಒಂದು ಪೈಸೆಯನ್ನೂ ಬಡ್ಡಿ ಮನ್ನಾ ರೂಪದಲ್ಲಿ ನೀಡಿಲ್ಲ; ಜತೆಗೆ ಬರ ಪರಿಸ್ಥಿತಿ ಇದ್ದರೂ ಕೃಷಿ ಸಾಲವನ್ನು ಮರು ಹೊಂದಾಣಿಕೆ ಮಾಡಿಲ್ಲ" ಎಂದು ಆಪಾದಿಸಿದ್ದರು. ಈ ಸಂಬಂಧ ದಾಖಲೆಗಳನ್ನು ಒದಗಿಸುವುದಾಗಿಯೂ ಅವರು ಸವಾಲು ಹಾಕಿದ್ದರು.

ಆದರೆ ಈ ವಾದವನ್ನು ಅಲ್ಲಗಳೆದ ವಿರೋಧ ಪಕ್ಷದ ನಾಯಕರು, ಸಾಲದ ಮೊತ್ತವನ್ನು ಸಕಾಲಕ್ಕೆ ಪಾವತಿಸಿದ ರೈತರಿಗೆ ಒಂದು ಲಕ್ಷ ರೂಪಾಯಿವರೆಗೂ ಬಡ್ಡಿಮನ್ನಾ ಸೌಲಭ್ಯವನ್ನು ಟಿಡಿಪಿ ಸರ್ಕಾರ ನೀಡಿತ್ತು ಎಂದು ಪ್ರತಿಪಾದಿಸಿದ್ದರು. ಈ ಸಂಬಂಧ ಸರ್ಕಾರಿ ಆದೇಶವನ್ನು ಪ್ರಸ್ತುತಪಡಿಸಿದ ಅವರು, ಮಾಧ್ಯಮದ ಮುಂದೆ ಸಾಮಾಜಿಕ- ಆರ್ಥಿಕ ಸಮೀಕ್ಷೆ ವರದಿಯನ್ನೂ ಬಹಿರಂಗಪಡಿಸಿದ್ದರು.

ಶುಕ್ರವಾರ ಶೂನ್ಯ ಬಡ್ಡಿಯ ಕೃಷಿ ಸಾಲದ ಬಗೆಗೆ ಸದನದಲ್ಲಿ ನಡೆದ ಬಿಸಿಬಿಸಿ ಚರ್ಚೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಮಾತನಾಡಿದ ನಾಯ್ಡು, ಆಡಳಿತಾರೂಢ ಪಕ್ಷದ ಸದಸ್ಯರು ಟಿಡಿಪಿಗೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

2012ರಲ್ಲಿ ಕಾಂಗ್ರೆಸ್ ಸರ್ಕಾರ ಶೂನ್ಯ ಬಡ್ಡಿ ಯೋಜನೆಯನ್ನು ಆರಂಭಿಸಿದ್ದು, ಟಿಡಿಪಿ ಸರ್ಕಾರ ಇದನ್ನು ಮುಂದುವರಿಸಿತ್ತು. ಸಕಾಲಿಕವಾಗಿ ಸಾಲ ಮರುಪಾವತಿ ಮಾಡಿದ ರೈತರಿಗೆ ಬಡ್ಡಿ ಮನ್ನಾ ಮಾಡಲಾಗಿತ್ತು. ಆದರೆ ಈ ಸಂಬಂಧ ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಕ್ಷಮೆ ಯಾಚಿಸುತ್ತಾರೆಯೇ ಅಥವಾ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆಯೇ ಎನ್ನುವುದು ಅವರಿಗೆ ಬಿಟ್ಟದ್ದು ಎಂದು ವಿರೋಧ ಪಕ್ಷದ ನಾಯಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News