ಎಲ್‌ನಿನೊ ದುರ್ಬಲ: ಭಾರತಕ್ಕೆ ಲಾಭ !

Update: 2019-07-13 04:14 GMT

ಹೊಸದಿಲ್ಲಿ, ಜು.13: ಎಲ್‌ನಿನೊ ಹವಾಮಾನ ಪರಿಸ್ಥಿತಿ ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ದುರ್ಬಲವಾಗಿದ್ದು, ಇದರಿಂದ ಪ್ರಸಕ್ತ ವರ್ಷದ ಮುಂಗಾರು ಋತುವಿನ ಉಳಿದ ತಿಂಗಳುಗಳಲ್ಲಿ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಎನ್‌ನಿನೊ ಪರಿಣಾಮ ಸಂಪೂರ್ಣ ಮಬ್ಬಾಗಲಿದೆ ಎಂದು ಅಮೆರಿಕದ ಹವಾಮಾನ ಏಜೆನ್ಸಿಗಳ ಇತ್ತೀಚಿನ ವರದಿಗಳು ಹೇಳಿವೆ.

ಸಮಭಾಜಕ ವೃತ್ತದ ಫೆಸಿಫಿಕ್ ಪ್ರದೇಶದಲ್ಲಿ ಉಷ್ಣತೆ ಹೆಚ್ಚಾಗುವ ಪ್ರಕ್ರಿಯೆಯನ್ನು ಎಲ್‌ನಿನೊ ಎಂದು ಕರೆಯಲಾಗುತ್ತದೆ. ಇದು ಭಾರತದ ಮುಂಗಾರು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಎಲ್‌ನಿನೊ ಪರಿಣಾಮದಿಂದಾಗಿ ಭಾರತದಾದ್ಯಂತ ಜೂನ್‌ನಲ್ಲಿ ಮುಂಗಾರು ಮಳೆ ಕುಂಠಿತಗೊಂಡಿದ್ದು, ಶೇಕಡ 33ರಷ್ಟು ಕೊರತೆಗೆ ಇದು ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ಅಂದಾಜಿಸಿದ್ದಾರೆ.

ಈ ಮುಂಗಾರು ಋತುವಿನುದ್ದಕ್ಕೂ ಅಂದರೆ ಸೆಪ್ಟೆಂಬರ್ ಅಂತ್ಯದವರೆಗೂ ದುರ್ಬಲ ಎಲ್‌ನಿನೊ ಪರಿಣಾಮ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹವಾಮಾನ ಮುನ್ಸೂಚನೆ ಕೇಂದ್ರ ಮತ್ತು ಇತರ ಅಮೆರಿಕನ್ ರಾಷ್ಟ್ರೀಯ ಏಜೆನ್ಸಿಗಳು ಗುರುವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂದಾಜಿನ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಎಲ್‌ನಿನೊ ಸ್ಥಿತಿ ತೀರಾ ದುರ್ಬಲವಾಗಿದೆ.

ಎಲ್‌ನಿನೊ ಪರಿಸ್ಥಿತಿ ಮುಂದಿನ ಎರಡು ತಿಂಗಳಲ್ಲಿ ಇಎನ್‌ಎಸ್‌ಓ- ತಟಸ್ಥ ಸ್ಥಿತಿಯಾಗಿ ಬದಲಾಗಲಿದೆ. ಉತ್ತರ ಸಮಭಾಜಕ ವೃತ್ತದಲ್ಲಿ ಚಳಿಗಾಲದಲ್ಲೂ ಈ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಕೂಡಾ ಎಲ್‌ನಿನೊ ಕರಾಳಛಾಯೆ ಮಾಸುತ್ತಿರುವುದನ್ನು ದೃಢಪಡಿಸಿದ್ದಾರೆ. "ಇದು ಮುಂಗಾರು ಮಳೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ. ಎಲ್‌ನಿನೊ ಪರಿಣಾಮ ಸಂಪೂರ್ಣವಾಗಿ ಹೋಗದಿದ್ದರೂ, ಇನ್ನು ಮುಂದೆ ಖಂಡಿತವಾಗಿಯೂ ಕಡಿಮೆಯಾಗಲಿದೆ" ಎಂದು ಮುಖ್ಯ ಮುಂಗಾರು ಮುನ್ಸೂಚನಾಧಿಕಾರಿ ಡಿ.ಸದಾನಂದ ಪೈ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News