ಸ್ವಚ್ಛ ಭಾರತ್ ಅಭಿಯಾನ: ಸಂಸತ್ತಿನ ಆವರಣದಲ್ಲಿ ಕಸ ಗುಡಿಸಿದ ಬಿಜೆಪಿ ಸಂಸದರಿಗೆ ಟ್ವಿಟರಿಗರ ಛೀಮಾರಿ
ಹೊಸದಿಲ್ಲಿ, ಜು.13: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಹಾಗು ಬಿಜೆಪಿ ಸಂಸದೆ ಹೇಮ ಮಾಲಿನಿ ಸಂಸತ್ತಿನ ಆವರಣದಲ್ಲಿ ಕಸ ಗುಡಿಸಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರು ‘ತೋರ್ಪಡಿಕೆಯ ಕೆಲಸ’ಕ್ಕಾಗಿ ಛೀಮಾರಿ ಹಾಕಿದ್ದಾರೆ.
ಈಗಾಗಲೇ ಸ್ವಚ್ಛಗೊಂಡಿರುವ ಕೆಲ ಒಣ ಎಲೆಗಳು ಮಾತ್ರ ಬಿದ್ದಿರುವ ಸಂಸತ್ ಆವರಣವನ್ನು ಸ್ವಚ್ಛಗೊಳಿಸುತ್ತಿರುವುದೇಕೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದು, ವಾಸ್ತವವಾಗಿ ಎಲ್ಲಿ ಸ್ವಚ್ಛತೆಯ ಅಗತ್ಯವಿದೆಯೋ ಅಲ್ಲಿಗೆ ತೆರಳಿ ಎಂದಿದ್ದಾರೆ.
ನಿಮ್ಮ ಕೆಲಸ ನಕಲಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಂಸತ್ತಿನ ಆವರಣ ಈಗಾಗಲೇ ಸ್ವಚ್ಛವಾಗಿದೆಯಲ್ಲವೇ?, ಈ ಫೋಟೊಗಳು ಅನಗತ್ಯ”, “ಮೂರ್ಖತನ, ಮಾಧ್ಯಮಗಳ ಮುಂದೆ ಈ ನಾಟಕಗಳನ್ನು ಅವರು ಯಾವಾಗ ಕೊನೆಗೊಳಿಸುತ್ತಾರೆ ಎಂಬುದು ತಿಳಿದಿಲ್ಲ. ದೇಶವನ್ನು ಸ್ವಚ್ಛವಾಗಿಡುವುದು ಯಾವುದೇ ಸರಕಾರದ ಜವಾಬ್ದಾರಿ. ಆದ್ದರಿಂದ ಅದಕ್ಕೆ ಸ್ವಚ್ಛ ಭಾರತ್ ಎಂಬ ಪ್ರತ್ಯೇಕ ತೆರಿಗೆ ಯಾಕೆ?”, “ಸಂಸತ್ತಿನ ಒಳಗೆ ಯಾಕೆ?, ಅವರು ಕಸಗಳಿಂದ ತುಂಬಿರುವ, ಅಸ್ವಚ್ಛ ರಸ್ತೆಗಳಿಗೆ ಏಕೆ ತೆರಳಬಾರದು” ಎಂದು ಟ್ವಿಟರಿಗರು ಪ್ರಶ್ನಿಸಿದ್ದಾರೆ.
#WATCH Delhi: BJP MPs including Minister of State (Finance) Anurag Thakur and Hema Malini take part in 'Swachh Bharat Abhiyan' in Parliament premises. pic.twitter.com/JJJ6IEd0bg
— ANI (@ANI) July 13, 2019