ದಲಿತ ಕಾರ್ಯಕರ್ತನನ್ನು ‘ಅವಮಾನಿಸಿದ’ ಆರೋಪ: ಮಾಧ್ಯಮ ಸಂಸ್ಥೆಯ ಸಿಇಒ ಬಂಧನ

Update: 2019-07-13 10:44 GMT

ಹೈದರಾಬಾದ್, ಜು.13: ದಲಿತ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಆಧಾರದಲ್ಲಿ ತೆಲುಗು ಮಾಧ್ಯಮ ಸಂಸ್ಥೆ ‘ಮೊಜೊ ಟಿವಿ’ ಇದರ ಸಿಇಒ ಪಿ. ರೇವತಿ ಅವರನ್ನು ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಜನವರಿ 23ರಂದು ಭಾಗವಹಿಸಿದ್ದ ವಿ. ವರಪ್ರಸಾದ್ ಎಂಬವರು ತಮ್ಮ ದೂರಿನಲ್ಲಿ ಆ ನಿರ್ದಿಷ್ಟ ಶೋ ನಿರೂಪಕರಾಗಿದ್ದ ಕೆ. ರಘು ಹಾಗೂ ರೇವತಿ ಕಾರ್ಯಕ್ರಮದ ವೇಳೆ ತನ್ನ ಜಾತಿ ಉಲ್ಲೇಖಿಸಿದ್ದರೆಂದು ಆರೋಪಿಸಿದ್ದರು.

ಶುಕ್ರವಾರ ಬಂಜಾರ ಹಿಲ್ಸ್ ಠಾಣೆಯ ಪೊಲೀಸರು ರೇವತಿ ಅವರ ನಿವಾಸಕ್ಕೆ ತೆರಳಿ ತಮ್ಮೊಡನೆ ಠಾಣೆಗೆ ಬರುವಂತೆ ಹೇಳಿದ್ದರು. ಅಲ್ಲಿ ಅವರ ಹೇಳಿಕೆ ದಾಖಲಿಸಿದ ನಂತರ ಅವರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜನವರಿ 23ರಂದು ಪ್ರಸಾರವಾದ ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಮಹಿಳಾ ಹೋರಾಟಗಾರ್ತಿಯೊಬ್ಬರೂ ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಿರೂಪಕರ ಅಭಿಪ್ರಾಯಗಳು ತಾರತಮ್ಯದಿಂದ ಕೂಡಿದೆ ಎಂದು ವರಪ್ರಸಾದ್ ಹೇಳಿದಾಗ ರಘು ಆಕ್ಷೇಪಿಸಿ “ದಲಿತರಾಗಿ ನೀವು ದೇಶದಲ್ಲಿ ನಡೆಯುತ್ತಿರುವ ದಲಿತರ ದೌರ್ಜನ್ಯದ ಬಗ್ಗೆ ಪ್ರಶ್ನಿಸುವುದಿಲ್ಲ, ಬದಲಾಗಿ ಮಹಿಳೆಯರ ದೇವಳ ಪ್ರವೇಶಾತಿ ಬಗ್ಗೆ ನಿಮಗೆ ಚಿಂತೆಯಿದೆ,'' ಎಂದಿದ್ದರು.

ಈ ವಾಗ್ವಾದ ಮುಂದುವರಿದು  ಕೊನೆಗೆ ವರಪ್ರಸಾದ್ ಅವರನ್ನು ಸ್ಟುಡಿಯೋದಿಂದ ಹೊರ ನಡೆಯುವಂತೆ ರಘು ಹೇಳಿದ್ದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ರೇವತಿ, ವರಪ್ರಸಾದ್ ಅವರು ಜಗಳವಾಡಲೆಂದೇ ಸ್ಟುಡಿಯೋಗೆ ಆಗಮಿಸಿದ್ದಾರೆ ಎಂದು ಆರೋಪಿಸಿದ್ದರು.

ಶುಕ್ರವಾರ ಪೊಲೀಸರು ತಮ್ಮ ಮನೆ ಬಾಗಿಲಿಗೆ ಬಂದಂತೆಯೇ ರೇವತಿ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಕಳುಹಿಸಿದ್ದ ಎರಡು ನೋಟಿಸ್ ಗಳಿಗೆ ರೇವತಿ ಪ್ರತಿಕ್ರಿಯಿಸಿದ್ದರೂ ಅದನ್ನು ಪರಿಗಣಿಸದೆ ಪೊಲೀಸರು ಇದೀಗ ಒತ್ತಡದಲ್ಲಿ ಅವರನ್ನು ಬಂಧಿಸಿದ್ದಾರೆಂದು ರೇವತಿ ಪತಿ ಚಿತ್ರ ನಿರ್ಮಾಪಕ ಡಿ ಚೈತನ್ಯ ಆರೋಪಿಸಿದ್ದಾರೆ.

ಆದರೆ ರೇವತಿ ತಮ್ಮ ನೋಟಿಸ್ ಗಳಿಗೆ ಉತ್ತರ ನೀಡಿರಲಿಲ್ಲ ಎಂದು ಬಂಜಾರ ಹಿಲ್ಸ್ ಠಾಣೆಯ ಎಸಿಪಿ ಶ್ರೀನಿವಾಸ್ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News