×
Ad

ವಿದೇಶಿ ಮಹಿಳೆ ಜತೆ ರಹಸ್ಯ ಮಾಹಿತಿ ಹಂಚಿಕೊಂಡ ಯೋಧನ ಬಂಧನ

Update: 2019-07-13 18:37 IST

ರೋಹ್ಟಕ್, ಜು.13: ಎರಡು ವರ್ಷಗಳಿಂದ ವಿದೇಶಿ ಮಹಿಳೆಯೊಬ್ಬರಿಗೆ ಸೇನೆಯ ರಹಸ್ಯ ಮಾಹಿತಿ ನೀಡುತ್ತಿದ್ದ ಮಹೇಂದರ್ ಘರ್ ಜಿಲ್ಲೆಯ ಬಸ್ಸೈ ಗ್ರಾಮದ ಯೋಧ ರವೀಂದರ್ ಕುಮಾರ್ ಯಾದವ್ (21) ಎಂಬಾತನನ್ನು ನರ್ನೌಲ್ ಪೊಲೀಸರು ಬಂಧಿಸಿದ್ದಾರೆ. ಏಳು ಸಜೀವ ಕಾಟ್ರಿಡ್ಜ್, ಎರಡು ಮೊಬೈಲ್ ಫೋನುಗಳು ಹಾಗೂ ಮೂರು ಸಿಮ್ ಕಾರ್ಡುಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.

ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಆರೋಪಿ ಯಾದವ್ ಐದು ದಿನಗಳ ರಜೆಯ ಮೇಲೆ ಊರಿಗೆ ಮರಳಿದ್ದಾಗ ಆತನನ್ನು ನರ್ನೌಲ್ ರೈಲ್ವೆ ನಿಲ್ದಾಣದ ಸಮೀಪದ ಡಾಬಾ ಒಂದರಿಂದ ಬಂಧಿಸಲಾಗಿದೆ. ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಾರ್ಚ್ 2017ರಲ್ಲಿ ಸೇನೆಯನ್ನು ಸೇರಿದ್ದ ಆತ ಅಮೃತಸರ್ ನಲ್ಲಿ ಕಳೆದ ವರ್ಷ ಕರ್ತವ್ಯದಲ್ಲಿದ್ದ ವೇಳೆ ವಿದೇಶಿ ಮಹಿಳೆಯ ಸಂಪರ್ಕ ಸಾಧಿಸಿದ್ದ. ಆಕೆಯೊಡನೆ ಫೇಸ್ ಬುಕ್ ನಲ್ಲಿ ಚಾಟ್ ಕೂಟ ಆರಂಭಿಸಿದ್ದ. ತಾನು ಸೇನಾ ಯೋಧ ಎಂದು ರವೀಂದರ್ ಹೇಳಿದ ನಂತರ ಆತನೊಡನೆ ಆಕೆ ವೀಡಿಯೋ ಕಾಲ್ ನಡೆಸುತ್ತಿದ್ದಳು. ಆತ ತನ್ನ ಸೇನಾ ಘಟಕದ ಸ್ಥಳ ಹಾಗೂ ಅಲ್ಲಿರುವ ಶಸ್ತ್ರಾಸ್ತ್ರಗಳ ಬಗ್ಗೆ ಆಕೆಗೆ ಮಾಹಿತಿ ನೀಡಿದ್ದನಲ್ಲದೆ, ತನಗೆ ಅಮೃತಸರ್ ನಿಂದ ಅರುಣಾಚಲ ಪ್ರದೇಶಕ್ಕೆ ವರ್ಗಾವಣೆಯಾಗಿದೆ  ಎಂದೂ ತಿಳಿಸಿದ್ದ. ಆ ಮಹಿಳೆ ಆತನ ಖಾತೆಯಲ್ಲಿ ರೂ 5,000 ಜಮೆ ಮಾಡಿದ್ದಳೆಂದೂ ತಿಳಿದು ಬಂದಿದೆ.

ಆ ಮಹಿಳೆ ತನ್ನನ್ನು ಕ್ಯಾಪ್ಟನ್ ಅನು ಎಂದು ಆತನಿಗೆ ಪರಿಚಯಿಸಿಕೊಂಡಿದ್ದಳು. ಮಹಿಳೆ ಯಾವ ದೇಶದವಳೆಂದು ಇನ್ನೂ ತಿಳಿದು ಬಂದಿಲ್ಲವಾದರೂ ಆಕೆ ಪಾಕಿಸ್ತಾನೀಯಳಾಗಿರಬೇಕೆಂಬ ಶಂಕೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News